ಮಡಿಕೇರಿ, ಡಿ. 21: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ವೈದ್ಯರುಗಳಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಯಾಗಾರದಲ್ಲಿ ಆಯುಷ್ಮಾನ್ ಭಾರತ್ ಮತ್ತು ಸುವರ್ಣ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಮಾಹಿತಿ ನೀಡಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಎಂಬ ಸ್ವಾಯತ್ತ ಸಂಸ್ಥೆಯ ಮೂಲಕ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಸಂಯೋಜಿತ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಪ್ರಾಥಮಿಕ (291), ನಿರ್ದಿಷ್ಟ ದ್ವಿತೀಯ (254), ತೃತೀಯ (900) ತುರ್ತು (169) ಹಂತದ ಚಿಕಿತ್ಸೆಯನ್ನು ರಾಜ್ಯದ ಎಲ್ಲಾ ವರ್ಗದ ಜನತೆಗೆ ಭರವಸೆ ಮಾದರಿಯಲ್ಲಿ ಒದಗಿಸುವ ಯೋಜನೆಯಾಗಿರುತ್ತದೆ. ಈ ಯೋಜನೆಯನ್ನು ಅಕ್ಟೋಬರ್ 30-2018 ರಿಂದ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯದಲ್ಲಿ ವಾಸವಾಗಿರುವ ಹಾಗೂ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವ ರೋಗಿಗಳು (ಬಿಪಿಎಲ್ ಮತ್ತು ಅಂತ್ಯೋದಯ) ಅರ್ಹರಾಗಿರುತ್ತಾರೆ. ಸಾಮಾನ್ಯ ರೋಗಿಗಳು ರಾಜ್ಯದಲ್ಲಿ ವಾಸವಾಗಿರುವ ಹಾಗೂ 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಅರ್ಹತಾ ಕಾರ್ಡ್ ಇಲ್ಲದೆ ಹಾಗೂ ಆದ್ಯತೇತರ ಕಾರ್ಡ್ (ಎಪಿಎಲ್) ಹೊಂದಿರುವ ರೋಗಿಗಳು.

ಅರ್ಹತಾ ರೋಗಿಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ರೆಫರಲ್ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ರೂ. 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ.(1614 ಚಿಕಿತ್ಸಾ ವಿಧಾನಗಳಿಗೆ). ಸಾಮಾನ್ಯ ರೋಗಿಗಳಿಗೆ ಸಹ-ಪಾವತಿ ಆಧಾರದ ಮೇಲೆ ರೂ. 1.50 ಲಕ್ಷದವರೆಗೆ ಚಿಕಿತ್ಸೆ ಒದಗಿಸಲಾಗುತ್ತದೆ. ಶೇ. 30 ಸರ್ಕಾರಿ ಅನುದಾನ ಶೇ. 70 ರೋಗಿಯೇ ಭರಿಸಬೇಕಾಗುತ್ತದೆ. (1614 ಚಿಕಿತ್ಸಾ ವಿಧಾನಗಳಿಗೆ). ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಜ್ವರ, ಕೆಮ್ಮು ವಾಂತಿ-ಭೇದಿ ಮುಂತಾದ ಎಲ್ಲಾ ರೀತಿಯ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ಕಾರ್ಯಪ್ಪ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಜಗದೀಶ್, ಡಿ.ಸಿ. ತೇಜಸ್ ಹಾಜರಿದ್ದರು.