ಮಡಿಕೇರಿ, ಡಿ. 22: 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ನೆರೆ ಸಂತ್ರಸ್ತ ಮಹಿಳೆಯರಿಗಾಗಿ ಸ್ತ್ರೀ ರೋಗ ತಜ್ಞ ವೈದ್ಯರಿಂದ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು. ಸಭಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ವಲಯ ಮೇಲ್ವಿಚಾರಕ ಮುಕುಂದ ಉದ್ಘಾಟಿಸಿ, ಗ್ರಾಮೀಣ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಈ ಶಿಬಿರ ಏರ್ಪಡಿಸಿರುವದು ಬಡ ಮಹಿಳೆಯರಿಗೆ ಉಪಕಾರವಾಗಿದೆ. ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆಹಾರವನ್ನು ಅತೀ ಮುತುವರ್ಜಿಯಿಂದ ಸೇವಿಸಬೇಕು ಎಂದರು.
ಮಡಿಕೇರಿಯ ಶ್ರೀ ರಾಜಾ ರಾಜೇಶ್ವರಿ ಆಸ್ಪತ್ರೆಯ ಡಾ. ರಾಜೇಶ್ವರಿ ನವೀನ್‍ಕುಮಾರ್ ಮಾತನಾಡಿ, ದೇಶದ ಗ್ರಾಮೀಣ ಭಾಗದ ಮಹಿಳೆಯರು ಆರೋಗ್ಯದ ಬಗ್ಗೆ ವೈದ್ಯರನ್ನು ಸಂಪರ್ಕಿಸಲು ಹಿಂಜರಿಕೆ ಮಾಡುವದನ್ನು ನಿಲ್ಲಿಸಬೇಕು. ಪ್ರತೀ ಮಹಿಳೆಯ ಆರೋಗ್ಯವು ಅವಳ ಕುಟುಂಬದ ರಕ್ಷಣೆಗೆ, ಸಮಾಜಕ್ಕೆ ಅತೀ ಅವಶ್ಯಕವಾಗಿದೆ.
ಈ ಕಾರಣದಿಂದ ಉಚಿತ ಶಿಬಿರ ಆಯೋಜಿಸಿದ್ದೇವೆ. ಪ್ರತಿ ಮನೆಯಲ್ಲೂ ಮಕ್ಕಳನ್ನು ಜವಬ್ದಾರಿಯಿಂದ ಬೆಳೆಸಬೇಕು. ಆಗ ಅವರು ಸಮಾಜದ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ವಿಶೇಷವಾಗಿ ಮಹಿಳೆಯರು ಸ್ತ್ರೀ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ್ ಅಗೋಳಿಕಜೆ, ಗ್ರಾಮೀಣ ಪ್ರದೇಶದ ಮಹಿಳೆಯರು ಆರೋಗ್ಯದ ಬಗ್ಗೆ ವಹಿಸುವ ಕಾಳಜಿ ಕಡಿಮೆ.
ಅದರಲ್ಲೂ ಪ್ರಕೃತಿ ವಿಕೋಪದಂತಹ ಈ ಸಂದರ್ಭದಲ್ಲಿ ಇಂತಹ ಗ್ರಾಮಗಳಿಗೆ ಬಂದು ವೈದ್ಯಕೀಯ ಸೇವೆಯನ್ನು ನೀಡುತ್ತಿರುವದರಿಂದ ಜನರ ಪರಿಸ್ಥಿತಿಯ ಪುನಶ್ಚೇತನಗೊಳಿಸಲು ತುಂಬಾ ಉಪಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ವಿಮಲಾವತಿ ಪ್ರಾರ್ಥಿಸಿದರೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಯ ಮದೆನಾಡು ಒಕ್ಕೂಟದ ಅಧ್ಯಕ್ಷೆ ಸ್ವಾಗತಿಸಿದರು, ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ಸರಸ್ವತಿ ವಿಠಲರವರು ಉಪಸ್ಥಿತರಿದ್ದರು.
ಶಿಬಿರದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿ ತಮ್ಮ ಆರೋಗ್ಯ ತಪಾಸಣೆ ನಡೆಸಿಕೊಂಡರು. ಬೆಳಗ್ಗಿನಿಂದ ಸಂಜೆಯವರೆಗೂ ಡಾ. ರಾಜೇಶ್ವರಿ ನವೀನ್ ತಮ್ಮ ಸಿಬ್ಬಂದಿಗಳೊಂದಿಗೆ ವೈದ್ಯಕೀಯ ತಪಾಸಣೆ ನಡೆಸಿದರು. ಅನಿತಾ ಮಹೇಶ್ ವಂದಿಸಿದರು.