ಗೋಣಿಕೊಪ್ಪಲು, ಡಿ. 22: ಕೊಡಗು ಜಿಲ್ಲೆ ಈವರೆಗೆ 40 ಅಂತರರಾಷ್ಟ್ರೀಯ ಹಾಕಿ ಪಟುಗಳು ಹಾಗೂ ಅಶ್ವಿನಿ, ಅರ್ಜುನ್ ದೇವಯ್ಯ, ರೀತ್ ಅಬ್ರಹಾಂರಂತಹಾ ಅಥ್ಲೆಟ್‍ಗಳನ್ನು ದೇಶಕ್ಕೆ ನೀಡಿದೆ. ಆದರೆ, ಇಲ್ಲಿನ ಕ್ರೀಡಾಪಟುಗಳ ಸಾಧನೆಗೆ ಪೂರಕ ತಯಾರಿ ನಡೆಸಲು ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ. ಕೊಡಗನ್ನು ಕ್ರೀಡಾ ಜಿಲ್ಲೆಯಾಗಿ ಘೋಷಣೆ ಮಾಡಿದ್ದಲ್ಲಿ ಉತ್ತಮ ತರಬೇತಿ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತು ಕೊಳ್ಳುವ ಅಗತ್ಯವಿದೆ ಎಂದು ಪತ್ರಕರ್ತ ಹಾಗೂ ಅಂತರರಾಷ್ಟ್ರೀಯ ಹಾಕಿ ವೀಕ್ಷಕ ವಿವರಣೆಗಾರ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲು ಸಂತ ಥೋಮಸ್ ಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭುವನೇಶ್ವರದಲ್ಲಿ ಇತ್ತೀಚೆಗೆ ಮುಗಿದ ವಿಶ್ವಕಪ್ ಹಾಕಿಯಲ್ಲಿ ಕೊಡಗಿನ ಓರ್ವ ಆಟಗಾರರು ಇಲ್ಲದ ಬಗ್ಗೆ ವಿಷಾಧಿಸಿದ ಅವರು, ಕ್ರೀಡಾಪಟುಗಳು ಮಾದಕ ದೃವ್ಯ ಬಳಕೆಗೆ ಸಿಲುಕುತ್ತಿರುವದು ದುರಂತ. ಕೊಡಗಿನಲ್ಲಿ ಮಡಿಕೇರಿ, ಪೆÇನ್ನಂಪೇಟೆ ಹಾಗೂ ಕೂಡಿಗೆಯಲ್ಲಿ ಸಿಂಥೆಟಿಕ್ ಹಾಕಿ ಮೈದಾನವಿದ್ದರೂ ಸಾಲದು ಎಂದು ವಿಷಾಧಿಸಿದರು.
ಕರ್ನಲ್ ರಾಜವರ್ಧನ್ ಸಿಂಗ್ ರಾಥೋಡ್ ಕ್ರೀಡಾ ಇಲಾಖೆಯಲ್ಲಿ ಅಧಿಕಾರ ಹೊಂದಿದ್ದು, ಖೇಲೋ ಇಂಡಿಯಾ ಮೂಲಕ ಗ್ರಾಮೀಣ ಪ್ರತಿಭೆ, ಬಡತನದಲ್ಲಿರುವ ಕ್ರೀಡಾಪಟುಗಳ ಆಯ್ಕೆಗೆ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಶಾಲೆಯ ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ, ಮಕ್ಕಳು ಉತ್ತಮ ಆರೋಗ್ಯ ಮತ್ತು ಸದೃಢ ದೇಹ ಸಂಪತ್ತಿಗಾಗಿ ಹೆಚ್ಚು ಆಟವಾಡಬೇಕು. ಇಂದಿನ ಮಕ್ಕಳು ಅಧಿಕವಾಗಿ ಕೊಠಡಿಯಲ್ಲಿಯೇ ಕಳೆಯುತ್ತಾರೆ. ಆದರೆ ಅಧಿಕ ಟಿ.ವಿ. ವೀಕ್ಷಣೆ, ಇಂಟರ್‍ನೆಟ್ ಬಳಕೆಯಿಂದ ಮಕ್ಕಳ ಮೇಲೆ ಅಧಿಕ ದುಷ್ಪರಿಣಾಮಕ್ಕೆ ಕಾರಣವಾಗಿದೆ. ಮೈದಾನದಲ್ಲಿ ಮಕ್ಕಳು ದೇಹವನ್ನು ದಂಡಿಸಲು ಪೆÇೀಷಕರು, ಶಿಕ್ಷಕರು ಉತ್ತೇಜನ ನೀಡುವಂತಾಗ ಬೇಕು ಎಂದು ಹೇಳಿದರು.
ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ, ತರಬೇತುದಾರ ಗಾಡ್‍ಫ್ರೆಡ್ ಎಲ್ಲೀಸ್ ತಂಡದ ಮಾಸ್ ಪಿ.ಟಿ. ಮುಂತಾದ ಕಾರ್ಯಕ್ರಮಗಳು ಗಮನ ಸೆಳೆದವು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಮಾನ್ಯ ಕೆ.ಪಿ., ಸುರಂಜನ್, ಜಸ್ಟೀನ್ ಜೋಸೆಫ್ ಮುಂತಾದ ವಿದ್ಯಾರ್ಥಿಗಳನ್ನು ಅತಿಥಿಗಳು ಗೌರವಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಫಾದರ್ ಅಂತೋಣಿ, ವ್ಯವಸ್ಥಾಪಕ ಫಾದರ್ ಅಲೆಕ್ಸ್, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಕೇಶವ್‍ಕಾಮತ್, ಪ್ರಮೋದ್ ಗಣಪತಿ, ಪಿ.ಕೆ. ಪ್ರವೀಣ್, ವಿಲ್ಸನ್, ಎ.ಜೆ. ಬಾಬು, ಅಬ್ದುಲ್ ಸಮ್ಮದ್, ವಾರ್ಡ್ ಸದಸ್ಯರಾದ ಪ್ರಭಾವತಿ ಉಪಸ್ಥಿತರಿದ್ದರು.
ಫಾದರ್ ಪಿ.ಕೆ. ಜಾರ್ಜ್ ಸ್ವಾಗತಿಸಿ, ವಿದ್ಯಾರ್ಥಿ ಕವನ್ ವಂದಿಸಿದರು.
- ಸುದ್ದಿಸಂಸ್ಥೆ