ಮಡಿಕೇರಿ, ಡಿ. 22: ಕೊಡಗು ಪೊಲೀಸ್ ಇಲಾಖೆಯು ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವಲ್ಲಿ ಉತ್ತಮ ರೀತಿ ಕರ್ತವ್ಯದೊಂದಿಗೆ ಇಲಾಖೆಯಿಂದ ಆಯೋಜಿಸಿರುವ ಕ್ರೀಡಾಕೂಟದಲ್ಲಿಯೂ ಸಾಧನೆ ತೋರಿರುವದು ಹರ್ಷದಾಯಕ ಎಂದು ಕರ್ನಾಟಕ ದಕ್ಷಿಣ ವಲಯ ಐ.ಜಿ. ಶರತ್‍ಚಂದ್ರ ಅವರು ಶ್ಲಾಘಿಸಿದರು.

ಮೂರು ದಿನಗಳಿಂದ ಇಲ್ಲಿನ ಕೇಂದ್ರ ಮೈದಾನದಲ್ಲಿ ಆಯೋಜಿಸಿರುವ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಗವಹಿಸಿ ಅವರು ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಎಸ್ಪಿ ಡಾ. ಸುಮನ್ ಡಿ.ಪಿ. ಅವರ ಪತಿ ಮೃತ್ಯುಂಜಯ ಮೊದಲಾದವರು ಹಾಜರಿದ್ದರು.

ಕ್ರೀಡಾಕೂಟ ಸಮಾರೋಪ

ತಾ. 20 ರಂದು ಬೆಳಿಗ್ಗೆಯಿಂದ ಈ ಸಂಜೆಯ ತನಕ ಪೊಲೀಸ್ ಅಧಿಕಾರಿಗಳ ಸಹಿತ ಸಿಬ್ಬಂದಿಗಳಿಗೆ ಹಲವು ಪೈಪೋಟಿಗಳು ಜರುಗುವದರೊಂದಿಗೆ ವಿಜೇತ ತಂಡಗಳಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ಈ ಪ್ರಯುಕ್ತ ಸಂಜೆಗತ್ತಲೆ ನಡುವೆ ಅತ್ಯಾಕರ್ಷಕ ಚಿತ್ತಾರ ಮೂಡಿಸಿ ಬಾನೆಡೆಗೆ ಚಿಮ್ಮಿದ ಸಿಡಿಮದ್ದು ಪ್ರದರ್ಶನ ಹಾಗೂ ರಸಮಂಜರಿ ಕಾರ್ಯಕ್ರಮ ಮೂಡಿಬಂತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಪೊಲೀಸ್ ಉಪ ಅಧೀಕ್ಷಕರುಗಳಾದ ಕೆ.ಎಸ್. ಸುಂದರರಾಜ್, ಮುರುಳೀಧರ್, ನಾಗಪ್ಪ,

ನಿವೃತ್ತ ಎಸ್ಪಿ ಎಂ.ಎ. ಅಪ್ಪಯ್ಯ, ನಿವೃತ್ತ ಕರ್ನಲ್ ಉತ್ತಯ್ಯ ಸೇರಿದಂತೆ ನಿವೃತ್ತ ಪೊಲೀಸ್ ಬಳಗದ ಕುಟುಂಬಸ್ಥರು ಸಹಿತ ಕರ್ತವ್ಯ ನಿರತ ಇಲಾಖಾಧಿಕಾರಿಗಳು, ಸಿಬ್ಬಂದಿ, ಮತ್ತವರ ಕುಟುಂಬಸ್ಥರು, ಪುಟಾಣಿಗಳು ಪಾಲ್ಗೊಂಡು ಸೌಹಾರ್ಧತೆ ಮೆರೆದರು.

ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರು ಹೆತ್ತವರೊಂದಿಗೆ ಪತಿ, ಪುತ್ರಿ ಸಹಿತ ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡಿದ್ದರು.

ಜಿಲ್ಲಾ ಪೊಲೀಸ್ ಬಳಗ ಓಟ, ರಿಲೇ, ಕ್ರಿಕೆಟ್, ಕಬ್ಬಡಿ, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಬಾಂಬ್‍ದ ಸಿಟಿ ಇತ್ಯಾದಿ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪುರುಷ-ಮಹಿಳೆಯರು ತಮ್ಮ ತಮ್ಮ ಪ್ರತಿಭೆಯೊಂದಿಗೆ ಸಾಧನೆ ತೋರಿದರು.