ಮಡಿಕೇರಿ, ಡಿ. 22: ಕೊಡಗಿನ ಗಡಿ ಕೊಪ್ಪದಲ್ಲಿ ತಾ. 8ರಂದು ನಿಗೂಢ ರೀತಿ ಡಾ. ದಿಲೀಪ್ ಕುಮಾರ್ ಎಂಬವರನ್ನು ಕೊಲೆಗೈದಿರುವ ಆರೋಪಿಗಳ ಸುಳಿವು ಪೊಲೀಸ್ ಇಲಾಖೆಗೆ ಲಭಿಸಿರುವದಾಗಿ ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ತಾ. 8ರಂದು ರಾತ್ರಿ ದುಷ್ಕರ್ಮಿಗಳು ಕೊಪ್ಪದ ಬಿ.ಎಂ. ರಸ್ತೆಗೆ ಹೊಂದಿಕೊಂಡಿರುವ ನಿವಾಸದಲ್ಲಿ, ಡಾ. ದಿಲೀಪ್ ಕುಮಾರ್ ಅವರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು.
ಶಂಕಿತ ಜಾಲವನ್ನು ಕೊಡಗು- ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಭೇದಿಸಿದ್ದು, ಕೊಲೆಗಡುಕರ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ದೃಢಪಟ್ಟಿದೆ. ಮಡಿಕೇರಿ ನಗರದ ಆಟೋ ಚಾಲಕನೊಬ್ಬನ ಸಹಿತ ಹೊರ ಜಿಲ್ಲೆಯ ಹಂತಕರು ದುಷ್ಕøತ್ಯದಲ್ಲಿ ಭಾಗಿಯಾಗಿರುವ ಸುಳಿವು ಲಭಿಸಿದ್ದು, ಪೊಲೀಸರ ತನಿಖೆಯಿಂದ ಇನ್ನಷ್ಟೇ ನೈಜಾಂಶ ಹೊರಬೀಳಬೇಕಿದೆ.