ಮಡಿಕೇರಿ, ಡಿ. 22: ಪ್ರವಾಹ, ಭೂಕುಸಿತ ಹಾಗೂ ಬರ ವಿಕೋಪ ತಡೆಗಟ್ಟುವದು ಹಾಗೂ ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ವಿವಿಧ ಇಲಾಖಾ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು.

ಮೈಸೂರು ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ಡಾ. ಜೆ.ಆರ್. ಪರಮೇಶ್ ವಿಕೋಪ ನಿರ್ವಹಣೆ, ಅಪಾಯ, ಸಾಂಸ್ಥಿಕ ರಚನೆಗಳು ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಅಧಿಕಾರಿ ಚಂದನ್ ಜಿಲ್ಲಾ ವಿಕೋಪ ನಿರ್ವಹಣೆ ಜೀವ ರಕ್ಷಣೆ ಕಾಪಾಡುವಿಕೆ ಸ್ಪಂದನೆ, ಪುನರ್ ವಸತಿ ಹಂತದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳು, ಜವಾಬ್ದಾರಿಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಜಿಲ್ಲಾಮಟ್ಟದ ವಿಕೋಪ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಯೋಜನಾ ತಯಾರಿಕೆ, ಪುನರ್ ಪರಿಶೀಲನೆಯಲ್ಲಿ ಜಿಲ್ಲಾಡಳಿತದ ಜವಾಬ್ದಾರಿಗಳು ಮತ್ತಿತರ ಬಗ್ಗೆ ಮಾಹಿತಿ ನೀಡಿದರು.