ಬೆಂಗಳೂರು, ಡಿ. 22: ಸುದೀರ್ಘ ಕಾಲದ ಹಗ್ಗ ಜಗ್ಗಾಟದ ಬಳಿಕ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ಕೊನೆಗೂ ವಿಸ್ತರಣೆಯಾಗಿದೆ.

ಕಾಂಗ್ರೆಸ್‍ನ ಎಂಟು ಶಾಸಕರು ರಾಜಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ಕಾಂಗ್ರೆಸ್‍ನಲ್ಲಿರುವ ಸಚಿವ ಸ್ಥಾನ ಆಕಾಂಕ್ಷಿಗಳ ಒತ್ತಾಯಕ್ಕೆ ಮಣಿದು ಹೈಕಮಾಂಡ್ ಕೊನೆಗೂ ಸಂಪುಟ ವಿಸ್ತರಣೆಗೆ ಮುಂದಾಗಿತ್ತು. ಈಗಲೂ ಅತೃಪ್ತ ಶಾಸಕರ ಅಸಮಾಧಾನ ಗೊಂದಲಗಳ ನಡುವೆಯೇ ಎಂಟು ಶಾಸಕರು ಸಂಪುಟಕ್ಕೆ ಸೇರ್ಪಡೆ ಯಾಗಿದ್ದಾರೆ.

ಸಂಪುಟದಲ್ಲಿದ್ದ ರಮೇಶ್ ಜಾರಕಿಹೊಳಿ ಮತ್ತು ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಒಟ್ಟು ಆರು ಸ್ಥಾನಗಳಿಗೆ ಸಚಿವರನ್ನು ಸೇರ್ಪಡೆ ಮಾಡಿಕೊಂಡಂತಾಗಿದೆ.

ನೂತನ ಸಚಿವರುಗಳೆಂದರೆ: ಎಂ.ಬಿ. ಪಾಟೀಲ್ (ಬಬಲೇಶ್ವರ ), ಆರ್. ಬಿ. ತಿಮ್ಮಾಪುರ, ವಿಧಾನ ಪರಿಷತ್ ಸದಸ್ಯ (ಬಾಗಲಕೋಟೆ), ಸತೀಶ್ ಜಾರಕಿಹೊಳಿ (ಯಮಕನ ಮರಡಿ), ಎಂ.ಟಿ.ಬಿ. ನಾಗರಾಜ್ (ಹೊಸಕೋಟೆ), ಸಿ.ಎಸ್. ಶಿವಳ್ಳಿ (ಕುಂದಗೋಳ), ಪರಮೇಶ್ವರ್ ನಾಯ್ಕ್ (ಹೂವಿನ ಹಡಗಲಿ), ರಹೀಂ ಖಾನ್ (ಬೀದರ್ ಉತ್ತರ) ಹಾಗೂ ಇ. ತುಕಾರಾಂ (ಸಂಡೂರು).

ಹೊಸ ಸಚಿವರ ಪದಗ್ರಹಣ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಹಾಜರಿದ್ದು, ಎಲ್ಲ ಹೊಸ ಸಚಿವರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು. ಜೆಡಿಎಸ್ ಕಡೆಯಿಂದ ಇನ್ನೂ ಎರಡು ಸಚಿವ ಸ್ಥಾನಗಳು ಖಾಲಿ ಇವೆ. ಧನುರ್ಮಾಸ ಕಳೆದ ಬಳಿಕ ಸಂಪುಟ ವಿಸ್ತರಣೆ ನಡೆಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.