ಮಡಿಕೇರಿ, ಜ. 9: ಮಣಿಪಾಲ್ ಕಂಪೆನಿಗೆ ರೂ. 62 ಕೋಟಿಯಷ್ಟು ಹಣ ವಂಚಿಸಿದ ಪ್ರಕರಣವೊಂದು ಬಯಲಾಗಿದ್ದು, ಕಂಪೆನಿಯ ಡಿ.ಜಿ.ಎಂ., ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈ ಮೋಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವವರಲ್ಲಿ ಕೊಡಗು ಮೂಲದವರಾದ ತಾಯಿ ಹಾಗೂ ಮಗಳು ಸೇರಿದ್ದಾರೆ.

ಮಣಿಪಾಲ್ ಎಜುಕೇಷನ್ ಮತ್ತು ಮೆಡಿಕಲ್ ಗ್ರೂಪ್‍ನ (ಎಂಇಎಂಜಿ) ಹಣಕಾಸು ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ ಸಂದೀಪ್ ಗುರುರಾಜ್ ಹಾಗೂ ಇತರರು ಸೇರಿ ಸಮೂಹ ಸಂಸ್ಥೆಗೆ ರೂ. 62 ಕೋಟಿಯಷ್ಟು ವಂಚಿಸಿದ್ದಾರೆ ಎಂಬದು ಈ ಅಪರಾಧವಾಗಿದ್ದು, ಅಧ್ಯಕ್ಷ ರಂಜನ್ ಪೈ ನೀಡಿರುವ ದೂರಿನಂತೆ ಪೊಲೀಸರು ಆರೋಪಿತರನ್ನು ಬಂಧಿಸಿದ್ದಾರೆ. ಸಂದೀಪ್ ಗುರುರಾಜ್, ಆತನ ಪತ್ನಿ ಚಾರುಸ್ಮಿತಾ ಸೇರಿದಂತೆ ಈತನ ಮಾಜಿ ಸಹದ್ಯೋಗಿಯಾಗಿದ್ದ ಕೊಡಗು ಮೂಲದ ಮಹಿಳೆ ಈಗ ಮುಂಬೈಯಲ್ಲಿ ನೆಲೆಸಿರುವ ಅಮೃತಾ ಚಂಗಪ್ಪ ಹಾಗೂ ಆಕೆಯ ತಾಯಿ ಮೀರಾ ಚೆಂಗಪ್ಪ ಬಂಧಿತರಾಗಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಮೀರಾ ಚಂಗಪ್ಪ ಅವರ ಪುತ್ರ ದುಬೈಯಲ್ಲಿರುವ ಖತಾರ್ ಏರ್‍ವೇಸ್‍ನ ಪೈಲೆಟ್ ವಿಶಾಲ್ ಸೋಮಣ್ಣ ಕೂಡ ಸೇರಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವಂಚನೆ ಪ್ರಕರಣದ ಕುರಿತು ಬೆಂಗಳೂರು ಕೇಂದ್ರ ವಲಯದ ಡಿ.ಸಿ.ಪಿ. ದೇವರಾಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ...?: 15 ವರ್ಷಗಳ ಹಿಂದೆ ಈ ಕಂಪೆನಿ ಸೇರಿದ್ದ ಸಂದೀಪ್ ಗುರುರಾಜ್ ಕಂಪೆನಿ ಮಾಲೀಕ ರಂಜನ್ ಪೈ ಹಾಗೂ ಕುಟುಂಬದ ವಿಶ್ವಾಸಗಳಿಸಿಕೊಂಡು ಡಿ.ಜಿ.ಎಂ. ಹುದ್ದೆಗೇರಿದ್ದು, ವಾರ್ಷಿಕ ರೂ. 48 ಲಕ್ಷ ವೇತನ ಪಡೆಯುತ್ತಿದ್ದರೂ ಇದೇ ಸಂಸ್ಥೆಗೆ ವಂಚಿಸಿರುವ ಆರೋಪ ವ್ಯಕ್ತವಾಗಿದೆ.

ಕಂಪೆನಿ ವಹಿವಾಟುಗಳಿಗೆ ಕಾರ್ಪೋರೇಟ್ ಕಂಪೆನಿಗಳೊಂದಿಗೆ ಆನ್‍ಲೈನ್ ಮೂಲಕದ ವ್ಯವಹಾರಕ್ಕೆ ಈತನಿಗೆ ಅನುಮತಿ ನೀಡಲಾಗಿತ್ತು. ಈ ವಿಶ್ವಾಸವನ್ನೇ ಬಂಡವಾಳವಾಗಿ ಮಾಡಿಕೊಂಡು ಈತ ‘ಸ್ಯಾಂಕ್ಟಮ್’ ಎಂಬ ಬೇನಾಮಿ ಕಂಪೆನಿ ಪ್ರಾರಂಭಿಸಿ ಇದಕ್ಕೆ ಎಂಇಎಂಜಿ ಖಾತೆಯಿಂದ ಹಣ ವರ್ಗಾಹಿಸುತ್ತಿದ್ದ. ಬಳಿಕ ಪತ್ನಿ ಚಾರುಸ್ಮಿತಾ ಹೆಸರಿನಲ್ಲಿ ‘ಬೀಹೈವ್ಸ್’ ಕಂಪೆನಿ ಅರಂಭಿಸಿದ್ದಾನೆ. ಅದರ ಖಾತೆಗೂ ಎಂಇಎಂಜಿಯ ಬ್ಯಾಂಕ್ ಖಾತೆಯಿಂದ ರೂ. 7.65 ಕೋಟಿಗಳವರೆಗೂ ಹಣ ವರ್ಗಾಯಿಸಿದ. ಅಷ್ಟೇ ಅಲ್ಲದೆ ಈ ಹಿಂದೆ ಎಂಇಎಂಜಿಯಲ್ಲಿ ತನ್ನ ಸಹೋದ್ಯೋಗಿಯಾಗಿದ್ದ ಅಮೃತಾ ಚೆಂಗಪ್ಪಗೂ ಕೋಟಿಗಟ್ಟಲೆ ಹಣ ಸೇರುವಂತೆ ಮಾಡಿದ. ಈ ವೇಳೆ ಅಮೃತಾ ಸೋದರ ವಿಶಾಲ್ ಹೆಸರಿನಲ್ಲಿ ದುಬೈನಲ್ಲಿಯೇ ‘ವೇದಾಂತ ಜನರಲ್ ಟ್ರೇಡಿಂಗ್ ಕಂಪೆನಿ’ ಆರಂಭವಾಯಿತು.

ಈ ಕಂಪೆನಿಯಿಂದ ಎಂಇಎಂಜಿ ಕೆಲವು ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವದಾಗಿ ಲೆಕ್ಕ ತೋರಿಸಿ ಭಾರೀ ಪ್ರಮಾಣದ ಹಣವನ್ನು ಈ ಬೇನಾಮಿ ಕಂಪೆನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಈ ಹಣದಲ್ಲಿಯೇ ರೂ. 8 ಕೋಟಿಗಳನ್ನು ತಾಯಿ ಮೀರಾ ಅವರು ಬೆಂಗಳೂರಿನ ಕೋರಮಂಗಲದಲ್ಲಿನ ಬ್ಯಾಂಕ್‍ನಲ್ಲಿ ಹೊಂದಿರುವ ಖಾತೆಗೆ ವಿಶಾಲ್ ವರ್ಗಾಯಿಸಿದ್ದಾನೆ. ಕೆಲವೊಮ್ಮೆ ಸೋದರಿ ಅಮೃತಾ ಖಾತೆಗೂ ಕೋಟಿಗಟ್ಟಲೆ ಹಣ ವರ್ಗಾಯಿಸಿದ್ದಾನೆ ಎಂಬದನ್ನು ಪೊಲೀಸರು ಈಗ ಪತ್ತೆಹಚ್ಚಿದ್ದಾರೆ.

ಇತ್ತೀಚೆಗೆ ಮಾರಿಷಸ್‍ನಲ್ಲಿರುವ ಮಣಿಪಾಲ್ ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್‍ನ ಬ್ಯಾಂಕ್ ಖಾತೆಯಿಂದ ದುಬೈನ ವೇದಾಂತ್ ಕಂಪೆನಿ ಖಾತೆಗೆ ಸಂದೀಪ್ ಒಂದೇ ಬಾರಿಗೆ ರೂ. 3.50 ಕೋಟಿ ವರ್ಗಾಯಿಸಿದ್ದಾನೆ. ಮೊತ್ತ ದೊಡ್ಡದ್ದಾಗಿದ್ದರಿಂದ ಬ್ಯಾಂಕ್‍ನವರು ಕಂಪೆನಿ ಛೇರ್ಮನ್‍ರಿಂದ ಮೌಖಿಕ ದೃಢೀಕರಣ ಅಗತ್ಯ ಎಂದಿದ್ದಾರೆ. ತಮ್ಮ ಬಾಸ್ ಪೈ ಅವರು ಬೋರ್ಡ್ ಮೀಟಿಂಗ್‍ಗಳಲ್ಲಿ ಬಿಜಿಯಾಗಿದ್ದಾರೆ. ಈಗ ಹಣ ವರ್ಗಾಯಿಸಿಬಿಡಿ. ಬಳಿಕ ಅವರಿಂದ ಖಾತರಿಪಡಿಸುವೆ ಎಂದು ಸಂದೀಪ್ ನಂಬಿಸಿದ್ದಾನೆ.

ಬ್ಯಾಂಕ್‍ನಿಂದ ಕರೆ: ಹಣ ವರ್ಗಾಯಿಸಿದ ಬಳಿಕ ಪೈ ಅವರಿಗೆ ಕರೆ ಮಾಡಿದ ಬ್ಯಾಂಕ್ ಮ್ಯಾನೇಜರ್, ರೂ. 3.50 ಕೋಟಿ ವರ್ಗಾವಣೆ ಖಾತರಿಗೆ ಮನವಿ ಮಾಡಿದ್ದಾರೆ. ಆಗ ಪೈ ಅವರಿಗೆ ಅನುಮಾನ ಬಂದು, ಕಂಪೆನಿಯ ಇತ್ತೀಚಿನ ವರ್ಷಗಳ ಹಣಕಾಸು ವಹಿವಾಟಿನ ಲೆಕ್ಕಗಳನ್ನು ಆಡಿಟರ್‍ರಿಂದ ಪರಿಶೀಲನೆಗೊಳಪಡಿಸಿದ್ದಾರೆ. ಆಗ ಮಣಿಪಾಲ್ ಸಮೂಹದ ದುಬೈ ಕಂಪೆನಿಯೊಂದರಿಂದಲೇ ವೇದಾಂತ ಕಂಪೆನಿಗೆ ಒಟ್ಟು ರೂ. 18.87 ಕೋಟಿ ವರ್ಗಾಯಿಸಿರುವದು ಪತ್ತೆಯಾಗಿದೆ.

3 ವರ್ಷಗಳಿಂದ ವಂಚನೆ: ಕಂಪೆನಿ ಆಡಳಿತ ಮಂಡಳಿ ನಿರ್ದೇಶಕರ ಸಹಿಗಳನ್ನೂ ನಕಲು ಮಾಡಿದ್ದ ಸಂದೀಪ್ ಹಲವಾರು ಬಾರಿ ರೂ. 10 ಲಕ್ಷಗಳ ಲೆಕ್ಕದಲ್ಲಿ ತನ್ನ ಬೇನಾಮಿ ಕಂಪೆನಿಗಳಿಗೆ ಹಣ ವರ್ಗಾಯಿಸಿರುವದು ದೃಢಪಟ್ಟಿದೆ. ಇದನ್ನು ಖುದ್ದು ಶೃತಿ ಪೈ ಅವರೇ ಖಚಿತಪಡಿಸಿಕೊಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಡಿಜಿಎಂ. ಸಂದೀಪ್ ಗುರುರಾಜ್ ಒಟ್ಟು ರೂ. 62 ಕೋಟಿ ವಂಚಿಸಿರುವದು ಕಂಡುಬಂದಿದೆ.

ಕಬ್ಬನ್ ಪಾರ್ಕ್ ಠಾಣೆಗೆ ದೂರು: ರಂಜನ್ ಪೈ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಂದೀಪ್ ವಿರುದ್ಧ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು, ವಿಠಲ್ ಮಲ್ಯ ರಸ್ತೆಯಲ್ಲಿನ ಜೆಡಬ್ಲ್ಯು ಮ್ಯಾರಿಯಟ್ ಕಟ್ಟಡದ 15ನೇ ಮಹಡಿಯಲ್ಲಿನ ಎಂಇಎಂಜಿ ಪ್ರಧಾನ ಕಚೇರಿಯಲ್ಲಿದ್ದ ಸಂದೀಪ್‍ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆ ಬಳಿಕ ವಂಚನೆ, ನಂಬಿಕೆ ದ್ರೋಹ, ಫೋರ್ಜರಿ ಪ್ರಕರಣಗಳಡಿ ಸಂದೀಪನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಬೃಹತ್ ವಂಚನೆಗೆ ಸಹಕಾರ ನೀಡಿದ್ದಕ್ಕಾಗಿ ಮೂವರು ಮಹಿಳೆಯರೂ ಬಂಧನ ಕ್ಕೊಳಗಾಗಿದ್ದಾರೆ ಎಂದು ಬೆಂಗ ಳೂರು ಕೇಂದ್ರ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.