ಮಡಿಕೇರಿ, ಜ. 9: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು ಗಿಡಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ. ಅಗ್ನಿಶಾಮಕ ದಳದವರ ಕ್ಷಿಪ್ರ ಕಾರ್ಯಾಚರಣೆಯ ಫಲವಾಗಿ ಸಂಭವನೀಯ ಪ್ರಾಣ ಮತ್ತು ಆಸ್ತಿ ಹಾನಿ ತಪ್ಪಿದೆ.

ನಿನ್ನೆ ಮಧ್ಯಾಹ್ನದ 12.45ರ ಸಮಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಹೊಗೆ ಕಾಣಿಸಿಕೊಂಡು ಧಗಧಗನೇ ಉರಿಯಲಾರಂಭಿಸಿದೆ. ಕೂಡಲೇ ಸ್ಥಳೀಯರು ಬೆಂಕಿನ್ನು ನಂದಿಸಲು ಯತ್ನಿಸಿದರಾದರೂ ಅಗ್ನಿಯ ಕೆನ್ನಾಲಿಗೆ ಇನ್ನಷ್ಟು ಹೆಚ್ಚಾಗತೊಡಗಿತು. ಸಂಬಂಧಿಸಿದ ಅಧಿಕಾರಿಯವರು ಕುಶಾಲನಗರ ಅಗ್ನಿಶಮಕ ದಳಕ್ಕೆ ವಿಷಯ ಮುಟ್ಟಿಸಿದರು. ಕೂಡಲೇ ದೌಡಾಯಿಸಿ ಬಂದ ಅಗ್ನಿಶಮಕದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಇಲ್ಲವಾದಲ್ಲಿ ಮಾರುಕಟ್ಟೆ ಆವರಣದಲ್ಲಿದ್ದ ಮನೆಗಳಿಗೆ ಮತ್ತು ಗೋಡಾನ್‍ಗೆ ಬೆಂಕಿ ತಗುಲಿ ಇನ್ನಷ್ಟು ಅನಾಹುತ ಸಂಭವಿಸಲಿತ್ತು. ಯಾರೋ ಕಿಡಿಗೇಡಿಗಳು ಒಣಗಿ ನಿಂತಿದ್ದ ಕಾಡು ಗಿಡಗಳಿಗೆ ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ.