ಕುಶಾಲನಗರ, ಜ. 9: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಹಾಗೂ ಚಿಕಿತ್ಸೆ ಯೋಜನೆ ಕುರಿತು ಗೋಡೆ ಬರಹದ ಮೂಲಕ ಜನಜಾಗೃತಿ ಮೂಡಿಸುತ್ತಿದೆ.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಂಪೌಂಡ್ ಮೇಲೆ ವಿಶೇಷ ಚೇತನರಿಗಾಗಿ ಆಪ್ತ ಸಮಾಲೋಚನೆ, ಸಾಧನ ಸಲಕರಣೆಗಳ ಜೋಡಣೆ, ವಾಕ್ ಶ್ರವಣ, ಶಾರೀರಿಕ ತರಬೇತಿ, ವೃತ್ತಿಪರ ತರಬೇತಿ, ಸಂಘಗಳ ಸಹಕಾರ, ಅಡೆತಡೆ ರಹಿತ ವಾತಾವರಣ ನಿರ್ಮಾಣ ಕುರಿತು ಚಿತ್ರಗಳನ್ನು ಬಿಡಿಸಿ ಎಲ್ಲರ ಗಮನ ಸೆಳೆಯಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿರುವ ವಿಶೇಷಚೇತನರನ್ನು ಗಮನದಲ್ಲಿಟ್ಟುಕೊಂಡು ವಿವೇಕಾನಂದ ಯೂತ್ ಮೂವ್ ಮೆಂಟ್ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಹಾಗೂ ಚಿಕಿತ್ಸೆ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಸೋಮವಾರಪೇಟೆ ತಾಲೂಕು ಸಂಯೋಜಕಿ ಸುನೀತಾ ಮಾಹಿತಿ ನೀಡಿದ್ದಾರೆ.