ಸೋಮವಾರಪೇಟೆ, ಜ. 12: ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಹಾಗೂ 60ನೇ ಮಹಾರಥೋತ್ಸವ ಜ. 13 ರಿಂದ (ಇಂದಿನಿಂದ) 17 ರವರೆಗೆ ನಡೆಯಲಿದೆ ಎಂದು ವಿಧಾನ ಪರಿಷತ್‍ನ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ತಿಳಿಸಿದರು.

ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 13ರಂದು ಬೆಳ್ಳಿ ಬಂಗಾರದ ದಿನವಾಗಿದ್ದು, ಪ್ರಾರ್ಥನಾ ಪೂಜೆಯನ್ನು ಮಾಡುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗುವದು. 14 ರಂದು ಕರುವಿನ ಹಬ್ಬ ನಡೆಯಲಿದೆ. ದಿನಾಂಕ 15 ರ ಮಂಗಳವಾರ ಅರಸುಬಲ ಸೇವೆ, ದಿನಾಂಕ 16ರ ಬುಧವಾರ ಮಧ್ಯಾಹ್ನ 12 ಗಂಟೆಗೆ 60ನೇ ಮಹಾರಥೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾ. 17 ರ ಗುರುವಾರ ಮಹಾ ಸಂಪ್ರೋಕ್ಷಣೆ ಮತ್ತು ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಜಾತ್ರೆಯ ಸಂದರ್ಭ ಸರ್ಕಾರದ ಹಲವು ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ, ರೈತರಿಗೆ ಮಾಹಿತಿ ಕಾರ್ಯಕ್ರಮಗಳು ನಡೆಯಲಿದೆ. ತಾ.13ರ ಸಂಜೆ 7.30ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಪಾಪು-ಬಾಪು ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕ್ರೀಡಾಕೂಟ: ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಮಧು ಮಾತನಾಡಿ, ಜಾತ್ರಾ ಮಹೋತ್ಸವದ ಪ್ರಯುಕ್ತ ಅಂತರ್‍ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಮತ್ತು ಥ್ರೋಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದರು.

ಕಬಡ್ಡಿ ವಿಜೇತರಿಗೆ ರೂ. 20 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವದು. ದ್ವಿತೀಯ ರೂ. 10 ಸಾವಿರ, ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ರೂ 4ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು. ಥ್ರೋಬಾಲ್ ಪ್ರಥಮ ಬಹುಮಾನ ರೂ 10 ಸಾವಿರ ನಗದು, ದ್ವಿತೀಯ ರೂ. 5ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು ಎಂದರು.

ಥ್ರೋಬಾಲ್ ಆಡುವ ತಂಡಗಳು ಜ.15ರ ಬೆಳಿಗ್ಗೆ 10ರೊಳಗೆ ತಮ್ಮ ತಂಡದ ಹೆಸರನ್ನು ಹಾಗೂ ಕಬಡ್ಡಿ ಆಡುವ ತಂಡಗಳು 16ರಂದು ಬೆಳಿಗ್ಗೆ 10ರೊಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದರು. ಥ್ರೋಬಾಲ್ ತಂಡದಲ್ಲಿ ಕಡ್ಡಾಯವಾಗಿ 9 ಮಂದಿ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಮೊ: 9483259544, 9483720835ನ್ನು ಸಂಪರ್ಕಿಸ ಬಹುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಕೆ.ಕೆ. ಪರಮೇಶ್ (ವಿಜಯ) ಉಪಸ್ಥಿತರಿದ್ದರು.