ಗೋಣಿಕೊಪ್ಪ ವರದಿ, ಜ. 12 : ಮತದಾನದ ಹಕ್ಕಿನ ಬಗ್ಗೆ ಗೊಂದಲದಲ್ಲಿದ್ದ ಸದಸ್ಯರು ಗೊಂದಲದಲ್ಲೇ ಮತದಾನದಲ್ಲಿ ಪಾಲ್ಗೊಂಡ ಘಟನೆ ಕಾನೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಂಡು ಬಂತು.

ಸಹಕಾರ ಸಂಘದಲ್ಲಿ ಆರ್ಥಿಕ ವ್ಯವಹಾರ ಮಾಡದ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ನಿಯಮದಿಂದಾಗಿ ಮತದಾನ ಮಾಡಬಹುದೇ ಎಂಬ ಗೊಂದಲದಲ್ಲಿದ್ದ ಮಾಹಿತಿ ಕೊರತೆಯಿಂದ ಶನಿವಾರ ಸದಸ್ಯರು ಮತದಾನದಲ್ಲಿ ಪಾಲ್ಗೊಳ್ಳುವಂತಾಯಿತು. ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಿಂದಲೇ ಮತದಾನ ಕ್ಷೇತ್ರಕ್ಕೆ ಆಗಮಿಸಿದರು.

ಒಟ್ಟು 1436 ಮತದಾರರಲ್ಲಿ 407 ಸದಸ್ಯರಿಗೆ ಮಾತ್ರ ಮತದಾನದ ಹಕ್ಕಿದೆ. ಉಳಿದ ಸದಸ್ಯರು ಸಂಘದಲ್ಲಿ ಸಂಘದ ಬೈಲಾ ಪ್ರಕಾರ ಆರ್ಥಿಕ ವ್ಯವಹಾರ ನಡೆಸದ ಕಾರಣ ಮತದಾನದ ಹಕ್ಕು ಕಳೆದು ಕೊಂಡಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ, ಹೈಕೋರ್ಟ್ ಎಲ್ಲಾರಿಗೂ ಮತದಾನದ ಹಕ್ಕಿದೆ ಎಂದು ಗುರುವಾರ ತೀರ್ಪು ನೀಡಿರುವದರಿಂದ ಮತದಾನ ಮಾಡಲು ಸದಸ್ಯರಿಗೆ ಮಾಹಿತಿ ಕೊರತೆಯ ನಡುವೇ ಪಾಲ್ಗೊಳ್ಳುವಂತಾಯಿತು.

ಚುನಾವಣಾಧಿಕಾರಿ ಸಂದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಸಾಲಗಾರರಲ್ಲದ ಕ್ಷೇತ್ರದಿಂದ 559, ಸಾಲಗಾರರ ಕ್ಷೇತ್ರದಿಂದ 877 ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಹೈಕೋರ್ಟ್ ತೀರ್ಪಿಗೂ ಮುನ್ನ ಸಾಲಗಾರರಲ್ಲದವರಲ್ಲಿ 99, ಸಾಲಗಾರರಿರುವ ಕ್ಷೇತ್ರದಲ್ಲಿ 407 ಸದಸ್ಯರಿಗೆ ಮಾತ್ರ ಮತದಾನ ಮಾಡಲು ಅವಕಾಶವಿತ್ತು. ಆದರೆ, ತೀರ್ಪಿನ ನಂತರ ಹೆಚ್ಚು ಸದಸ್ಯರಿಗೆ ಮತದಾನದ ಅವಕಾಶ ದೊರೆತಿದೆ ಎಂದರು. ಗೊಂದಲದ ಚುನಾವಣೆ ಎಂಬ ಕಾರಣಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

13 ಸ್ಥಾನಗಳಿಗೆ 22 ಸ್ಪರ್ಧಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಕಾನೂನು ಹೋರಾಟ

ಆರ್ಥಿಕ ವ್ಯವಹಾರ ನಡೆಸದವರಿಗೆ ಮತದಾನದ ಹಕ್ಕಿಲ್ಲ ಎಂಬ ನಿಯಮವಿರುವ ಬಗ್ಗೆ ಮಾಹಿತಿ ಇದ್ದರೂ ಹಾಲಿ ಆಡಳಿತ ಮಂಡಳಿ ಮಾಹಿತಿ ಮರೆಮಾಚಿ ಸದಸ್ಯರನ್ನು ಕತ್ತಲೆಗೆ ತಳ್ಳಿದ್ದಾರೆ. ಆದ್ದರಿಂದ ಈ ಚುನಾವಣೆ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಆರೋಪಿಸಿದರು.

ಚುನಾವಣಾ ಆವರಣದ ಸಮೀಪ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1436 ಮಂದಿ ಸದಸ್ಯರಿರುವ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೇವಲ 559 ಮಂದಿಗೆ ಮಾತ್ರ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಹಕ್ಕು ನೀಡಿರುವದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ. ಎಲ್ಲಾ ಸದಸ್ಯರಿಗೂ ಮತದಾನದ ಹಕ್ಕು ಇದ್ದರೂ ನಾಮಪತ್ರ ಸಲ್ಲಿಸುವ ಸಂದರ್ಭ ಆರ್ಥಿಕ ವ್ಯವಹಾರ ಮಾಡದವರಿಗೆ ಮತದಾನ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿಲ್ಲ ಎಂದು ಸೂಚನೆ ನೀಡಲಾಗಿತ್ತು. ಆದರೆ, ಎಲ್ಲಾ ಸದಸ್ಯರಿಗೂ ಮತದಾನದ ಹಕ್ಕು ನೀಡಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಾದೀಶರು ಆಕ್ಟ್ 20ಎ4 ಹಾಗೂ ಎ5 ಆಕ್ಟ್‍ನಂತೆ ಇಲ್ಲಿ ಮತದಾನದ ಹಕ್ಕಿಲ್ಲ ಎಂಬುವುದು ಸಹಕಾರ ಸಂಘಗಳಿಗೆ ಅನ್ವಯಿಸುವದಿಲ್ಲ. ಆ ಕಾರಣಕ್ಕಾಗಿ ಉಳಿದ ಸದಸ್ಯರಿಗೂ ಮತದಾನದ ಹಕ್ಕಿದೆ ಎಂದು ತೀರ್ಪು ನೀಡಿದೆ. ತೀರ್ಪು ನೀಡಿದ ಕೇವಲ 1 ದಿನಗಳಲ್ಲಿ ಮತದಾನ ನಡೆಸುವ ಅವಶ್ಯಕತೆ ಇರಲಿಲ್ಲ. ಮುಂದೂಡಿ ಮತ್ತೆ ಮತದಾನ ನಡೆಸಬಹುದಿತ್ತು. ಸದಸ್ಯರಿಗೆ ಮಾಹಿತಿ ಇಲ್ಲದೆ ಗೊಂದದಲ್ಲಿ ಚುನಾವಣೆ ನಡೆಯುವಂತಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಈ ರೀತಿ ನಡೆದ ಪ್ರಕರಣಗಳಲ್ಲಿ ಸಾಕಷ್ಟು ಬಾರಿ ಮತ್ತೆ ಚುನಾವಣೆ ನಡೆಸಲಾಗಿದೆ ಎಂದರು.

ನ್ಯಾಯಾಲಯವು ಸಂಘದ ಸರ್ವಸದಸ್ಯರಿಗೆ ಮತದಾನದ ಹಕ್ಕು ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿದೆ. ಆದರೆ ಚುನಾವಣಾಧಿಕಾರಿಗಳು ಪ್ರತಿ ಸದಸ್ಯರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲು ಸದಸ್ಯನ ಮನೆಗೆ ಚುನಾವಣೆಗೆ ಸಂಬಂಧಫಟ್ಟ ವಿಚಾರದಲ್ಲಿ ಮಾಹಿತಿ ನೀಡಲು ವಿಫಲವಾಗಿದ್ದಾರೆ. ಇದರಿಂದ ಸಾಕಷ್ಟು ಸಂಘದ ಸದಸ್ಯರು ಮತದಾನದ ಹಕ್ಕಿದ್ದರೂ ಮತದಾನದಿಂದ ದೂರ ಉಳಿಯುವಂತಾಗಿದೆ. ಮುಂದಿನ ಕಾನೂನು ಹೋರಾಟವನ್ನು ಸದಸ್ಯರ ಹಿತ ದೃಷ್ಟಿಯಿಂದ ಮುಂದುವರೆಸಲಾಗುವದು ಎಂದರು.

ಆಡಳಿತ ಮಂಡಳಿಯು ಮಹಾಸಭೆಯಲ್ಲಿ ಸದಸ್ಯರಿಗೆ ಮತದಾನದ ವಿಚಾರದಲ್ಲಿ ಮಾಹಿತಿ ನೀಡುವ ಅವಕಾಶವಿತ್ತು. ಪ್ರಚಾರ ಮಾಡಬಹುದಿತ್ತು. ಆಡಳಿತ ಮಂಡಳಿಯು ಏಕಪಕ್ಷಿಯವಾಗಿ ನಡೆದುಕೊಂಡಿರುವದು ಸರಿಯಲ್ಲ. ಉಳಿದ ಸದಸ್ಯರು ಚುನಾವಣೆಯಿಂದ ಹೊರಗುಳಿಯುವಂತಾಗಿದೆ ಎಂದರು.

ಈ ಸಂದರ್ಭ ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಕಳ್ಳಿಚಂಡ ಧನು, ಸದಸ್ಯರಾದ ತೀತರಮಾಡ ರಾಜ ಹಾಗೂ ಸಂಘದ ಸದಸ್ಯರುಗಳು ಇದ್ದರು.