ದುಗ್ಗಳ ಸದಾನಂದ ನಾಪೋಕ್ಲು: ಜ23. ರಸ್ತೆ, ನೀರು, ಚರಂಡಿ, ವಿದ್ಯುತ್ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ನೀಡುವದು ಆಯಾ ಸ್ಥಳೀಯ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾದರೂ, ಸೌಲಭ್ಯ ನೀಡಿ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಸಾರ್ವಜನಿಕರಿಗೆ ನೀಡಿದ ಸವಲತ್ತುಗಳ ನಿರ್ವಹಣೆಯೂ ಅಷ್ಟೇ ಮುಖ್ಯವಾಗುತ್ತದೆ. ಆದರೆ, ಕೊಡಗಿನ ಕೆಲವು ಪಂಚಾಯಿತಿಗಳಲ್ಲಿ ರಸ್ತೆ, ಚರಂಡಿಗಳ ನಿರ್ವಹಣೆಯಿಲ್ಲದೆ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿರುವದು ಹೊಸತೇನಲ್ಲ. ಈ ಸಾಲಿಗೆ ನಾಪೋಕ್ಲು ಗ್ರಾಮ ಪಂಚಾಯಿತಿಯೂ ಸೇರುತ್ತದೆ. ಪಟ್ಟಣದ ಮುಖ್ಯ ಬೀದಿಗಳು ದುರ್ವಾಸನೆ ಬೀರುತ್ತಿವೆ. ಜನರು ಮೂಗು ಮುಚ್ಚಿಕೊಂಡೇ ಸಂಚರಿಸುತ್ತಿದ್ದಾರೆ. ಇಂತಹ ಪರಿಸರದಲ್ಲಿ ಗಿರಾಕಿಗಳೂ ಇಲ್ಲದೆ, ಆಟೋ ಚಾಲಕರÀು ವ್ಯಾಪಾರಿಗಳು ಕಂಗೆಡುವಂತಾಗಿದೆ. ಸಾರ್ವಜನಿಕರು ಸಾಮಾನ್ಯವಾಗಿ ವಿದ್ಯುತ್ ಕಡಿತವಾದರೆ, ರಸ್ತೆ ಗುಂಡಿಯಿದ್ದರೆ ಒಂದಷ್ಟು ದಿನ ಸುಧಾರಿಸಿಕೊಳ್ಳುತ್ತಾರೆ. ಆದರೆ, ಪರಿಸರವೇ ಕುಲಗೆಟ್ಟರೆ ಸಹಿಸಿಕೊಳ್ಳುವದಿಲ್ಲ. ಇಂಥ ಪರಿಸ್ಥಿತಿ ನಾಪೋಕ್ಲು ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ಪಟ್ಟಣ ವ್ಯಾಪ್ತಿಯ ಚರಂಡಿಗಳನ್ನು ನಿರ್ವಹಣೆ ಮಾಡದಿರುವ ಹಿನ್ನೆಲೆಯಲ್ಲಿ ದುರ್ವಾಸನೆಯ ವಾತಾವರಣ ಮನೆ ಮಾಡಿದೆ.

(ಮೊದಲ ಪುಟದಿಂದ) ಹೊಟೇಲ್ ಮತ್ತು ಇತರ ಮಳಿಗೆಗಳಿಂದ ನೇರವಾಗಿ ಚರಂಡಿ ಸೇರುತ್ತಿರುವ ಕಲುಷಿತ ನೀರು, ಚರಂಡಿಯಲ್ಲಿ ಹರಿಯಲಾಗದೆ ಸ್ತಬ್ದವಾಗಿದೆ. ಕಸಕಡ್ಡಿ, ತ್ಯಾಜ್ಯಗಳಿಂದ ತುಂಬಿರುವ ಚರಂಡಿಗಳಲ್ಲಿ ಒಂದೇ ಸಮನೆ ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿ ಕೊಂಡೇ ಪಟ್ಟಣದಲ್ಲಿ ಸಂಚರಿಸುತ್ತಿ ದ್ದಾರೆ. ವಿಪರ್ಯಾಸ ವೆಂದರೆ, ನಿಂತಲ್ಲಿ, ಕುಳಿತಲ್ಲಿ ದುರ್ವಾಸನೆ ಹರಡುರುತ್ತಿರುವದರಿಂದ ಗ್ರಾಹಕರೂ ಕೂಡಾ ಅಂಗಡಿಗಳತ್ತ ಸುಳಿಯುತ್ತಿಲ್ಲ ಎಂಬದು ವ್ಯಾಪಾರಿಗಳ ಅಳಲು. ಸ್ಥಳೀಯ ಆಟೋ ನಿಲ್ದಾಣದ ಆವರಣದಲ್ಲೂ ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ಇದೆ. ಈ ಬಗ್ಗೆ ಹಲವು ಬಾರಿ ಪಂಚಾಯಿತಿ ಗಮನಕ್ಕೆ ತರಲಾಗಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

2017ರಲ್ಲಿ ನಾಪೋಕ್ಲಿನಲ್ಲಿÀ ಜಾಂಡೀಸ್ ಕಾಯಿಲೆ ಹರಡುವ ಭೀತಿ ಎದುರಾಗಿತ್ತು. ಹಲವು ಮಂದಿ ಆಸ್ಪತ್ರೆಗಳಿಗೂ ದಾಖಲಾಗಿದ್ದರು. ಇದೀಗ ಅಂತಹದ್ದೇ ಪರಿಸ್ಥಿತಿ ಮರುಕಳಿಸಿದರೂ ಅಚ್ಚರಿಯಿಲ್ಲ. ಅತಿವೃಷ್ಟಿಯ ಬಳಿಕ, ಜಿಲ್ಲೆಯಲ್ಲಿ ಉರಿಬಿಸಿಲು ಕಾಣಿಸಿಕೊಂಡಿದೆ. ಅಲ್ಲದೆ, ಬೇಸಿಗೆ ಕಾವೇರುತ್ತಿರು ವಂತೆಯೇ ನೀರಿನ ಸಮಸ್ಯೆಯೂ ಉಲ್ಬಣಿಸುವ ಲಕ್ಷಣಗಳು ಗೋಚರಿ ಸುತ್ತಿವೆ, ಇಂಥ ಸೂಕ್ಷ್ಮ ಹವಾಮಾನದಲ್ಲೇ ಸೊಳ್ಳೆಗಳಿಂದ ಕಾಯಿಲೆ ಹರಡುವ ಭೀತಿ ಹೆಚ್ಚಿದೆ. ಅಶುಚಿತ್ವದ ವಾತಾವರಣದಿಂದಾಗಿ, ಸಾಂಕ್ರಾಮಿಕ ರೋಗ ಹರಡುವದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಮತ್ತು ಅರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಚರಂಡಿಗಳನ್ನು ಸ್ವಚ್ಛ ಮಾಡುವದರೊಂದಿಗೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ತಪ್ಪಿದರೆ, ಪಂಚಾಯಿತಿಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುವದಾಗಿ ಜೆಡಿಎಸ್ ಪ್ರಮುಖರಾದ ಎಂ.ಎ.ಮನ್ಸೂರ್ ಅಲಿ, ಇಬ್ರಾಹಿಂ, ಪಿ.ಯಚ್, ಮಹಮ್ಮದ್ ಪಿ.ಎಂ., ಮಂಜು ಮತ್ತು ಆಟೋ ಚಾಲಕರಾದ ಜಕ್ರಿಯಾ, ನಾಸೀರ್ ಕೆ.ಎಂ., ಎಂ.ಎ.ಮೊಯ್ದು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.