ವೀರಾಜಪೇಟೆ, ಜ. 24: ಕಳೆದ ಎರಡು ದಿನಗಳಿಂದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರವಣಿಗೆ ಹಾಗೂ ಆಸ್ಪತ್ರೆಗೆ ಸಂಬಂಧ ಪಡದ ದುಸ್ಥಿತಿಯ ಚಿತ್ರಗಳನ್ನು (ವ್ಯಾಟ್ಸ್‍ಪ್) ಪ್ರಚಾರ ಮಾಡುತ್ತಿರುವದರಿಂದ ಆಸ್ಪತ್ರೆಯಲ್ಲಿ ವೈದ್ಯರುಗಳು ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರು ಇಲ್ಲಿನ ಡಿವೈಎಸ್‍ಪಿ ನಾಗಪ್ಪ ಅವರಿಗೆ ಜಾಲತಾಣದ ಚಿತ್ರಣ ಸಾಕ್ಷಿ ಸಮೇತ ದೂರು ಸಲ್ಲಿಸಿದ್ದಾರೆ. ಬೇರೆಡೆಯಲ್ಲಿ ತೆಗೆದ ಚಿತ್ರಗಳನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಚಿತ್ರಗಳೆಂದು ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೂರನ್ನು ಪರಿಶೀಲಿಸಿದ ಡಿವೈಎಸ್‍ಪಿ. ನಾಗಪ್ಪ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.