ಮಡಿಕೇರಿ, ಜ. 23: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಕರ್ತವ್ಯ ನಿರತ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರನ್ನು ನಿಂದಿಸಿದ್ದು, ನೊಂದ ಮಹಿಳಾ ಅಧಿಕಾರಿ ಕಣ್ಣೀರು ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ.ಸೋಮವಾರ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಕ್ರಿಯಾ ಸಮಾಧಿಯ ವಿಧಿವಿಧಾನ ವೀಕ್ಷಿಸಲು ಸಾ.ರಾ. ಮಹೇಶ್ ಗದ್ದುಗೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಪ್ರವೇಶ ನಿರಾಕರಿಸಿದ್ದಕ್ಕೆ ಎಸ್ಪಿ ದಿವ್ಯಾ ಗೋಪಿನಾಥ್ ಮತ್ತು ಸಾ.ರಾ.ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಸಚಿವರು ಗದರಿದ್ದರಿಂದ ಎಸ್ಪಿ ಕಣ್ಣೀರು ಹಾಕಿದ್ದಾರೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸಾ.ರಾ.ಮಹೇಶ್ ಅವರು, ತಾನು ಮಂತ್ರಿ ಎಂದು ಹೇಳಿದರೂ ತಡೆದರು. ಕೆಲವು ಅಧಿಕಾರಿಗಳಿಗೆ ಮಂತ್ರಿಗಳು ಯಾರು ಎನ್ನುವದೇ ಗೊತ್ತಿರಲಿಲ್ಲ. ಹಾಗಾಗಿ ನಾವೇ ನಮ್ಮನ್ನು ಅವರಿಗೆ ಪರಿಚಯಿಸಿಕೊಳ್ಳುತ್ತೇವೆ. ನನ್ನ ಹಿಂದೆ ಬಂದ ಸಚಿವ ರನ್ನು ಇದೇ ಎಸ್ಪಿ ತಡೆದಿದ್ದರು.
ಈ ವೇಳೆ ನಾನು ಅವರಿಗೆ ಯಾವದೇ ಕೆಟ್ಟ ಪದಗಳಿಂದಲೂ ನಿಂದಿಸಿಲ್ಲ. ದಾರಿ ಬಿಡಿ ಎಂಬವದನ್ನು ಎತ್ತರದ ಧ್ವನಿಯಲ್ಲಿ ಹೇಳಿದ್ದೇನೆ. ಯೂಸ್ಲೆಸ್ ತರಹ ಮಾತನಾಡಿ, ನ್ಯೂಸೆನ್ಸ್ ಕ್ರಿಯೇಟ್ ಮಾಡಬೇಡಿ ಅಂತಾ ಹೇಳಿದ್ದೇನೆ. ಅಧಿಕಾರಿಗಳು ತಪ್ಪು ಮಾಡಿದಾಗ ಅವರಿಗೆ ಸಚಿವರು ಏನೂ ಹೇಳಬಾರದಾ? ಆ ಕ್ಷಣದಲ್ಲಿ ನಡೆದ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೇನೆ. ನನ್ನ ಹೇಳಿಕೆಗೆ ಯಾವದೇ ಕ್ಷಮೆ ಕೇಳುವದಿಲ್ಲ ಮತ್ತು ವಿಷಾದ ವ್ಯಕ್ತಪಡಿಸಲ್ಲ ಎಂದು ಸಾ.ರಾ. ಮಹೇಶ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.