ಕುಶಾಲನಗರ, ಜ. 30: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಬೈಚನಹಳ್ಳಿಯ ಮಾರಿಯಮ್ಮ ದೇವಾಲಯ ಬಳಿಯಿಂದ ಮೆರವಣಿಗೆ ಮೂಲಕ ಸಾಗಿಬಂದ ಪ್ರತಿಭಟನಾಕಾರರು ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಅನಂತಕುಮಾರ್ ಹೆಗಡೆ ಮತ್ತು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಅನಂತಕುಮಾರ್ ಹೆಗಡೆ ಅವರನ್ನು ಮೋದಿ ತಮ್ಮ ಮಂತ್ರಿ ಮಂಡಲದಿಂದ ಕೈಬಿಡಬೇಕು ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಅವರಲ್ಲಿ ಬೇಷರತ್ ಕ್ಷಮೆಯಾಚಿಸ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಅನಂತಕುಮಾರ್ ಮೋದಿ ಆಸ್ಥಾನದ ವಿದೂಷಕನಂತೆ ಕಾರ್ಯನಿರ್ವ ಹಿಸುತ್ತಿದ್ದು ಸಾಮರಸ್ಯ ಕೆಡಿಸುವ ಕಾರ್ಯಗಳಿಗೆ ನಿಯೋಜಿಸಿ ದಂತಿದ್ದಾರೆ. ಸಂವಿಧಾನದ ಆಶಯಗಳ ವಿರುದ್ಧವಾಗಿ ವರ್ತಿಸುತ್ತಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಕೊಡಗಿನ ಪವಿತ್ರ ನೆಲದಲ್ಲಿದ್ದುಕೊಂಡು ರಕ್ತದ ಕೋಡಿ ಹರಿಸುವ ಮಾತು ಗಳನ್ನಾಡಿ ಅಪಚಾರ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಚೋದನಾ ಹೇಳಿಕೆ ಮೂಲಕ ಸಮಾಜದಲ್ಲಿ ವಿಪ್ಲವ ಉಂಟುಮಾಡಿದ್ದಾರೆ. ಇಂತಹ ಅನೇಕ ವಿವಾದಾತ್ಮಕ ಹೇಳಿಕೆಗಳ ಮೂಲಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯತೆಯ ಘನತೆಗೆ ಚ್ಯುತಿ ಉಂಟುಮಾಡು ತ್ತಿದ್ದಾರೆ. ಸಮಾಜಕ್ಕೆ ಕಂಟಕಪ್ರಾಯ ರಾಗಿರುವ ಅವರನ್ನು ಕೇಂದ್ರದ ಮಂತ್ರಿ ಮಂಡಲದಿಂದ ಕೈಬಿಡಬೇಕು. ಜಿಲ್ಲೆಯ ಪೊಲೀಸ್ ಇಲಾಖೆ ಅನಂತ್ ಕುಮಾರ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡು ಕಾನೂನು ಕ್ರಮಕೈಗೊಳ್ಳ ಬೇಕಿದೆ. ದಿನೇಶ್ ಗುಂಡೂರಾವ್ ವಿರುದ್ಧ ವ್ಯಕ್ತಿಗತ ನಿಂದನೆ ಮಾಡಿದ್ದು ಕೂಡಲೆ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ನಂತರ ನಾಡಕಚೇರಿಗೆ ತೆರಳಿ ಅನಂತ್‍ಕುಮಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಂದಯಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ದಿನೇಶ್, ಶೇಖ್ ಖಲೀಮುಲ್ಲಾ, ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖಂಡರಾದ ಬಿ.ಜಿ.ಮಂಜುನಾಥ್ ಕುಮಾರ್, ಕೆ.ಕೆ.ಮಂಜುನಾಥ್ ಕುಮಾರ್, ನಟೇಶ್‍ಗೌಡ, ಪ್ರಮುಖರಾದ ಹೆಚ್.ಜೆ.ಕರಿಯಪ್ಪ, ಕೆ.ಎನ್. ಅಶೋಕ್, ಅಬ್ದುಲ್ ಖಾದರ್ ಮತ್ತಿತರರು ಇದ್ದರು.
ಮುಸ್ಲಿಂ ಒಕ್ಕೂಟ ಪ್ರತಿಭಟನೆ
ಕುಶಾಲನಗರ, ಜ. 30: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಖಂಡಿಸಿ ತಾಲೂಕು ಮುಸ್ಲಿಂ ಒಕ್ಕೂಟ ಹಾಗೂ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಅನಂತ್‍ಕುಮಾರ್ ಹೆಗಡೆ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕರೀಂ, ದೇವಸ್ಥಾನ ಉದ್ಘಾಟನೆ ಮಾಡಲು ಬಂದ ಸಚಿವರು ಒಂದು ಕೋಮಿನ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದರು.
ಕೊಡಗು ಜಲಪ್ರಳಯದಿಂದ ತತ್ತರಿಸಿದಾಗ ಕೊಡಗಿನ ಹಿಂದೂಗಳ ಪರ ಬರದೆ ಎಲ್ಲಿ ಹೋಗಿದ್ದಿರಿ. ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ನಡೆಯುವಾಗ ಎಲ್ಲಿ ಹೋಗಿತ್ತು ಹಿಂದುತ್ವ. ಕೊಡಗು ಸೌಹಾರ್ದತೆಗೆ ಹೆಸರಾಗಿದ್ದು ಯಾರೂ ಸಹ ನಿಮ್ಮ ಹೇಳಿಕೆಗೆ ತಲೆಕೆಡಿಸಿಕೊಳ್ಳುವದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಉಸ್ತಾದ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಬಿ.ರಾಜು, ಜಾಮಿಯಾ ಮಸೀದಿ ಕಾರ್ಯದರ್ಶಿ ತನ್ವೀರ್, ನೂರ್ ಮಸೀದಿಯ ನಿಜಾಮ್, ಪ್ರಮುಖ ಶಫಿ ಆಬಿದ್ ಜೈನ್ ಮತ್ತಿತರರು ಇದ್ದರು.