ಮಡಿಕೇರಿ, ಜ. 30: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಮೇರಿ ಗ್ರಾಮದ ಮಲ್ಲಮಟ್ಟಿ ಎಂಬಲ್ಲಿ ಇತ್ತೀಚೆಗೆ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮರ್ಜೀನಾ ಖಾತುನ್ ಎಂಬಾಕೆಯೇ ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಉಸ್ಮಾನ್ ಆಲಿ ಬಂಧಿತ ಆರೋಪಿ ಯಾಗಿದ್ದಾನೆ.ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಬಗ್ಗೆ ಮೊಕದ್ದಮೆ ಸಂಖ್ಯೆ 04/2019 ಕಲಂ 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ಇನ್ಸ್‍ಪೆಕ್ಟರ್ ಅವರ ನೇತೃತ್ವದಲ್ಲಿ ಹಾಗೂ ಸಿಪಿಐ (ಮೊದಲ ಪುಟದಿಂದ) ವೀರಾಜಪೇಟೆ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದು, ಪಿಐ ಡಿಸಿಐಬಿ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಮೃತೆ ಮರ್ಜೀನಾ ಖಾತುನ್‍ಳ ಪೂರ್ವಾಪರಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಡಿಸಿಐಬಿ ತಂಡ ಮರ್ಜೀನಾಳ ಗಂಢ ಉಸ್ಮಾನ್ ಅಲಿಯೇ ಆತನ ಪತ್ನಿಯನ್ನು ಕೊಲೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೇತೆ ಮರ್ಜೀನಾ ಆರೋಪಿಯ ಎರಡನೇ ಪತ್ನಿಯಾಗಿದ್ದು, ತನ್ನ ಸಣ್ಣ ಮಗುವನ್ನು ಆರೋಪಿಯೊಂದಿಗೆ ಹೆಗ್ಗಳದಲ್ಲಿ ಬಿಟ್ಟು ಮಲ್ಲಮಟ್ಟಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಉಸ್ಮಾನ್‍ನಿಗೆ ಆತನ ಹೆಂಡತಿಯನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದುದೇ ಕೊಲೆಗೆ ಕಾರಣ ಎಂದು ಆರೋಪಿಯಿಂದ ತಿಳಿದು ಬಂದಿದೆ.
ಬಂಧಿತ ವಿವರ: ಉಸ್ಮಾನ್ ಅಲಿ ತಂದೆ ಸೈಬುದ್ದೀನ್ (40), ಬಾಯ್ಬೇರಿಬೀಲ್ ಗ್ರಾಮ, ದೋರಾಂಗ್ ಜಿಲ್ಲೆ, ಅಸ್ಸಾಂ ರಾಜ್ಯದವನಾಗಿದ್ದು, ಎಸ್ ಅಂಡ್ ಎಸ್ ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ.
ಪೊಲೀಸ್ ಅಧೀಕ್ಷಕಿ ಡಿ.ಪಿ. ಸುಮನ್ ಅವರ ಆದೇಶದಂತೆ ವೀರಾಜಪೇಟೆ ಉಪ ವಿಭಾಗ ಉಪಾಧಿಕ್ಷಕ ನಾಗಪ್ಪ ಅವರ ಮಾರ್ಗ ದರ್ಶನದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ಇನ್ಸ್‍ಪೆಕ್ಟರ್ ಎಂ. ಮಹೇಶ್, ವೀರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಸುರೇಶ್ ಬೋಪಣ್ಣ, ಸಿಬ್ಬಂದಿಯವರಾದ ಕೆ.ವೈ. ಹಮ್ಮೀದ್ ಎ.ಎಸ್.ಐ., ಬಿ.ಎಲ್. ಯೋಗೇಶ್ ಕುಮಾರ್, ಎಂ.ಎಸ್. ನಿರಂಜನ್, ಕೆ.ಎಸ್. ಅನಿಲ್ ಕುಮಾರ್, ವಿ.ಜೆ. ವೆಂಕಟೇಶ್, ಕೆ.ಆರ್. ವಸಂತ, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಯವರಾದ ಬೆಳ್ಳಿಯಪ್ಪ, ಚಾಲಕರು ಗಳಾದ ಶಶಿಕುಮಾರ್, ಗೋಪಿನಾಥ್ ಹಾಗೂ ಸಿಡಿಆರ್ ಸೆಲ್‍ನ ಎಂ.ಎ. ಗಿರೀಶ್ ಹಾಗೂ ಸಿ.ಕೆ. ರಾಜೇಶ್ ಅವರು ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಾದ್ಯಂತ ಕಾಫಿ ತೋಟಗಳಲ್ಲಿ ಅಸ್ಸಾಂ ಹಾಗೂ ಇತರ ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ತಮ್ಮಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಕೂಲಿ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಒದಗಿಸುವದು ಕಡ್ಡಾಯವಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯತನ ತೋರಬಾರದೆಂದು ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.