ಮಡಿಕೇರಿ, ಜ. 30: ಕೊಡಗಿನಲ್ಲಿ ಪ್ರಕೃತಿ ಹಾನಿಯೊಂದಿಗೆ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ; ನಿರ್ಮಾಣ ಹಂತದಲ್ಲಿರುವ ಕಾಮಗಾರಿ ತೀರಾ ಕಳಪೆಯಾಗಿದ್ದು, ರಾಜ್ಯ ವಸತಿ ಸಚಿವ ಯು.ಟಿ. ಖಾದರ್ ಖುದ್ದು ಪರಿಶೀಲಿಸಿ ತಪ್ಪಿತಸ್ಥ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಬಿಜೆಪಿ ಮೇಲ್ಮನೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಇಂದು ಮಾದಾಪುರ ಬಳಿ ಜಂಬೂರು ಹಾಗೂ ಕರ್ಣಂಗೇರಿ ಪುನರ್ವಸತಿ ಕಾಮಗಾರಿ ಸ್ಥಳಕ್ಕೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿದ ಅವರು, ಸಂಬಂಧಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರ ರನ್ನು ತರಾಟೆಗೆ ತೆಗೆದುಕೊಂಡರು. ಸುಮಾರು ಐದು ಚದರಡಿ ವಿಸ್ತೀರ್ಣದಲ್ಲಿ ರೂ. 9.85ಲಕ್ಷ ವೆಚ್ಚದ ಮನೆಗೆ ಅಡಿಪಾಯ ಹಂತದಲ್ಲೇ ಕಳಪೆ ಕೆಲಸ ನಡೆಯುತ್ತಿದೆ ಎಂದು ಜನಪ್ರತಿನಿಧಿಗಳು ಬೊಟ್ಟು ಮಾಡಿದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಮೇಲ್ಮನೆ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ತೇಜಸ್ವಿನಿ ಗೌಡ ಅವರುಗಳು ಕೆಲಸದ ಗುಣಮಟ್ಟದ ವಿಪಕ್ಷ ನಾಯಕರ ಸಹಿತ ಸಿಡಿಮಿಡಿಗೊಂಡು, ಸಂಬಂಧಿಸಿ ದವರನ್ನು ತರಾಟೆಗೆ ತೆಗೆದುಕೊಂಡರು. ಒಂದು ಚದರ ಅಡಿಗೆ ರೂ. 2 ಲಕ್ಷದಂತೆ ಅಂದಾಜು ರೂ. 10 ಲಕ್ಷ ಕೆಲಸದಲ್ಲಿ ತೀರಾ ಕಳಪೆ ಎಂಬದಕ್ಕೆ ಸ್ಥಳದಲ್ಲೇ ಪರೀಕ್ಷಿಸಿ, ಉಪವಿಭಾಗಾ ಧಿಕಾರಿ ಜವರೇಗೌಡ ಅವರ ಗಮನಕ್ಕೆ ತಂದರು.

ನೀರು ಇತ್ಯಾದಿ ಉಪಯೋಗಿಸಿ ಕಾಂಕ್ರೀಟ್‍ಕರಣ ಸಮರ್ಪಕ ನಿರ್ವಹಿಸದೆ, ಈಗಲೇ ಕಿತ್ತು ಬರುವಂತಾಗಿದೆ ಎಂದು ತೇಜಸ್ವಿನಿ ಗೌಡ ಹಾಗೂ ಇತರರು ಬೊಟ್ಟು ಮಾಡಿದಾಗ; ಈ ಬಗ್ಗೆ ಜಿಲ್ಲಾಧಿಕಾರಿ ಯ ಅರಿವಿಗೆ ತರುವದಾಗಿ ಉಪ ವಿಭಾಗಾಧಿಕಾರಿ ನುಡಿದರು. ಇಂತಹ ಕಳಪೆ ಕೆಲಸದ ಬದಲಿಗೆ, ಸ್ಥಳೀಯರು ಹಾಗೂ ಸಂತ್ರಸ್ತ ಫಲಾನುಭವಿಗಳ ಸಮ್ಮುಖ ಮನೆ ನಿರ್ಮಿಸಲು ಜನಪ್ರತಿನಿಧಿಗಳು ತಿಳಿ ಹೇಳಿದರು.

ತುರ್ತು ಕೆಲಸಕ್ಕೆ ಆಗ್ರಹ: ಮಳೆಗಾಲಕ್ಕೆ ಮುನ್ನ ಏಪ್ರಿಲ್ ಕೊನೆಯೊಳಗೆ ಪುನರ್ವಸತಿ ಮನೆಗಳ ನಿರ್ಮಾಣಕ್ಕೆ ಆಗ್ರಹಿಸಲಾಗಿ, ಫೆಬ್ರವರಿ ಅಂತ್ಯದೊಳಗೆ ಕರ್ಣಂಗೇರಿಯಲ್ಲಿ ಮನೆಗಳನ್ನು ಪೂರ್ಣಗೊಳಿಸುವದಾಗಿ ಇಂಜಿನಿಯರ್ ಶ್ರೀನಿವಾಸ ಭರವಸೆ ನೀಡಿದರು. ಗೋಳಿಬಾಣೆಯಲ್ಲಿ ಏಪ್ರಿಲ್ ಹಾಗೂ ಜಂಬೂರುವಿನಲ್ಲಿ ಜೂನ್ ಒಳಗೆ ಮನೆಗಳ ಕೆಲಸ ಮುಗಿಸಲಾಗುವದು ಎಂದು ಅವರು ಮಾರ್ನುಡಿದರು.

ಜಿಲ್ಲಾಧಿಕಾರಿಯೊಂದಿಗೆ ಚರ್ಚೆ: ವಿಪಕ್ಷ ನಾಯಕರ ಸಹಿತ ಬಿಜೆಪಿ ಪ್ರತಿನಿಧಿಗಳು ಪುನರ್ವಸತಿ ಕಾಮಗಾರಿ ಪರಿಶೀಲನೆ ಬಳಿಕ ಪ್ರಬಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವ ರೊಂದಿಗೆ ಚರ್ಚಿಸಿದರು. ಜಿಲ್ಲೆಯಲ್ಲಿ ಸಂತ್ರಸ್ತರ ಮನೆಗಳೊಂದಿಗೆ, ಕೃಷಿ ಭೂಮಿ, ಕಾಫಿ ಇತ್ಯಾದಿ ತೋಟದ ಫಸಲು ಕಳೆದುಕೊಂಡವರಿಗೆ ಸಕಾಲದಲ್ಲಿ ಪರಿಹಾರ ಮೊತ್ತ ಒದಗಿಸಲು ಸೂಚಿಸಿದರು.

ಕೊಡಗಿನ ಜನತೆಯಿಂದ ಕೇಳಿಬರುತ್ತಿರುವ ಅಸಮಾಧಾನ ಕುರಿತು ಗಮನ ಹರಿಸುವ ಮೂಲಕ, ಕಷ್ಟಗಳಿಗೆ ಸ್ಪಂದಿಸಲು ತಿಳಿ ಹೇಳಿದ ನಾಯಕರು, ಮಳೆಗಾಲಕ್ಕೆ ಮುನ್ನ ಪರ್ಯಾಯ ಮನೆಯೊಂದಿಗೆ ಕೃಷಿ ಭೂಮಿ, ಫಸಲು ನಷ್ಟಕ್ಕೆ ನೆರವು ಒದಗಿಸಲು ಸಲಹೆಯಿತ್ತರು.

ಈ ಸಂದರ್ಭ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ತೇಜಸ್ವಿನಿ ರಮೇಶ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ.ಮೇದಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ್ ಕುಸುಮ ಮೊದ ಲಾದವರು ಇದ್ದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ಮಾದಾಪುರ, ಕರ್ಣಂಗೇರಿ, ಮದೆ ಮತ್ತಿತರ ಭಾಗಗಳಲ್ಲಿ ಮನೆ ನಿರ್ಮಾಣ ವಾಗುತ್ತಿದೆ ಎಂದು ಜನಪ್ರತಿನಿಧಿಗಳಿಗೆ ತಿಳಿಸಿದರು.

ಜನಪ್ರತಿನಿಧಿಗಳೊಂದಿಗೆ ಬಿಜೆಪಿ ಮುಖಂಡರಾರ ಎಸ್.ಜಿ. ಮೇದಪ್ಪ, ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪದಾಧಿಕಾರಿಗಳಾದ ಲೋಕೇಶ್ ಕುಮಾರ್, ಯಮುನಾ ಚಂಗಪ್ಪ, ಡೀನ್ ಬೋಪಣ್ಣ, ರವಿ ಕುಶಾಲಪ್ಪ, ಬಾಲಚಂದ್ರ ಕಳಗಿ, ಅನಿತಾ ಪೂವಯ್ಯ ಮೊದಲಾದವರು ಪಾಲ್ಗೊಂಡಿದ್ದರು.