ಮಡಿಕೇರಿ, ಜ. 30: ಇಬ್ಬರು ಮಾವುತರನ್ನು ಕೆಡವಿ ಸಾವಿಗೀಡು ಮಾಡಿದ್ದ, ಇತ್ತೀಚೆಗೆ ಮತ್ತೊಬ್ಬ ಮಾವುತನನ್ನು ತೀವ್ರ ಗಾಯಗೊಳಿಸಿದ್ದ 10 ವರ್ಷದ ಮರಿಯಾನೆ ಕಾರ್ತಿಕ್ ಇದೀಗ ತಾನೇ ಬಲಿಯಾಗಿದೆ. ಕಾಡು ಹೆಜ್ಜೇನು ನೊಣಗಳÀ ಕಡಿತದಿಂದ ಗಾಯಗೊಂಡಿದ್ದ ಆನೆ ಅದರಿಂದ ಉಂಟಾದ ಸೋಂಕುವಿನಿಂದ ಪ್ರಾಣ ಕಳೆದುಕೊಂಡಿದೆ ಎಂದು ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಂ. ಎಲ್. ಮಂಜುನಾಥ್ ಖಾತರಿಪಡಿಸಿದ್ದಾರೆ. ಕಾರ್ತಿಕ್ ಕಳೆದ ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದು ವನ್ಯಜೀವಿ ತಜ್ಞ ಡಾ. ಮುಜೀಬ್ ಅವರು ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಆನೆಯ ಕಳೇಬರವನ್ನು ಸುಡುವ ಮೂಲಕ ಅಂತಿಮ ಕ್ರಿಯೆ ನಡೆಸಲಾಯಿತು. ಅರಣ್ಯಾಧಿಕಾರಿಯವರ ಪ್ರಕಾರ ಕಾರ್ತಿಕ್‍ಗೆ ಬಹಳ ಹಿಂದೆಯೇ ಹೆಜ್ಜೇನು ಕಡಿದು ಗಾಯವಾಗಿತ್ತು. ಆನೆಯ ಹಿಂಭಾಗದಲ್ಲಿ ಗಾಯವಾಗಿದ್ದು ಚರ್ಮ ಮುಚ್ಚಲ್ಪಟ್ಟುದರಿಂದ ಈ ಗಾಯ ಗಮನಕ್ಕೇ ಬಂದಿರಲಿಲ್ಲ. ನಿಧಾನವಾಗಿ ಅದು ಸೋಂಕಾಗಿ ಪರಿರ್ತನೆಗೊಂಡಿದೆ. ಈ ಗಾಯದ ನೋವಿನಿಂದಾಗಿ ಆನೆ ಆಗಿಂದಾಗ್ಗೆ ಸಿಟ್ಟುಗೊಂಡು ಮಾವುತರ ಮೇಲೆ ಧಾಳಿ ಮಾಡುತ್ತಿದ್ದುದಕ್ಕೆ ಕಾರಣವಾಗಿತ್ತು ಎಂದು ತಡವಾಗಿ ಬೆಳಕಿಗೆ ಬಂದಿದೆ. ಜನವರಿ ತಾ. 13 ರಂದು ಆನೆ ಮಾವುತ ನವೀನ್ (31) ಮೇಲೆ ಧಾಳಿ ನಡೆಸಿತ್ತು. ಉದರ ಭಾಗಕ್ಕೆ ಆನೆಯ ದಂತದ ಕೋಡುವಿನಿಂದ ತಿವಿತದ ಗಾಯಗಳಾಗಿದ್ದು ಗಾಯಾಳು ನವೀನ್ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಘಟನೆಯ ಬಳಿಕವಷ್ಟೆ ತಪಾಸಣೆ ಮಾಡುವಾಗ ಆನೆ ಕಾರ್ತಿಕ್ ದೇಹದ ಹಿಂಭಾಗ ಹೆಜ್ಜೇನು ಕಡಿತದ ಗಾಯ ಪತ್ತೆಯಾಯಿತು. ಬಳಿಕ ಸೂಕ್ತ ಚಿಕಿತ್ಸೆ ನೀಡಿದರೂ ಹಳೆಯ ಗಾಯವಾದುದರಿಂದ ಸೋಂಕಿನ ಪರಿಣಾಮ ಮಿತಿ ಮೀರಿದ್ದುದರಿಂದ ಆನೆ ಸಾವಿಗೀಡಾಯಿತು. ಈ ಗಾಯದ ನೋವು ಆಗಾಗ್ಗೆ ಬಾಧಿಸುತ್ತಿದ್ದುದರಿಂದಲೇ ಆ ಸಂದರ್ಭ ಆನೆ ಆಕ್ರೋಶಗೊಂಡು ತನ್ನ ಸಿಟ್ಟನ್ನು ಮಾವುತರ ಮೇಲೆ ತೀರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದುದು ತಡವಾಗಿ ಪತ್ತೆಯಾಗಿದೆ.

(ಮೊದಲ ಪುಟದಿಂದ) ತೀವ್ರ ಗಾಯಗೊಂಡಿದ್ದ ಮಾವುತ ನವೀನ್ ಅವರ ಕರುಳು ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಬಳಿಕ ಇದೀಗ ಅವರ ಮನೆÀಗೆ ಕರೆ ತಂದಿದ್ದು ವಿಶ್ರಾಂತಿಯಲ್ಲಿರುವದಾಗಿ ಅರಣ್ಯಾಧಿಕಾರಿ ಮಾಹಿತಿಯಿತ್ತರು. ಶಸ್ತ್ರಚಿಕಿತ್ಸೆ ಸೇರಿದಂತೆ ಚಿಕಿತ್ಸಾ ವೆಚ್ಚ ರೂ. 2.50 ಲಕ್ಷವನ್ನು ಅರಣ್ಯ ಇಲಾಖೆಯಿಂದಲೇ ಭರಿಸಲಾಗಿದೆ. ಪತ್ನಿ ಮತ್ತು ಮಗುವನ್ನು ಹೊಂದಿರುವ ಮಾವುತ ನವೀನ್‍ನ ಪ್ರಾಣ ಅದೃಷ್ಟವಶಾತ್ ಹಾಗೂ ಸೂಕ್ತ ಸಕಾಲಿಕ ಚಿಕಿತ್ಸೆಯಿಂದ ಉಳಿದಿದೆ ಎಂದು ಅಧಿಕಾರಿ ವಿವರಿಸಿದರು.

ಕಿರಿ ವಯಸ್ಸಿನ ಆನೆ ಕಾರ್ತಿಕ್ ಮೂರು ಬಾರಿ ಮಾವುತರ ಮೇಲೆ ಧಾಳಿ ನಡೆಸಿತ್ತು. 2017 ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಇಬ್ಬರು ಮಾವುತರನ್ನು ಬಲಿ ತೆಗೆದುಕೊಂಡಿತ್ತು. ಏಪ್ರಿಲ್ 17 ರಂದು ತನ್ನ ಮಾವುತ ಅಣ್ಣು ಎಂಬವರನ್ನು ತುಳಿದು ಕೊಂದಿತ್ತು. ಬಳಿಕ ಮೇ 4 ರಂದು ಸಹಾಯಕ ಮಾವುತ ಮಣಿ ಎಂಬವರನ್ನು ತುಳಿದು ಹತ್ಯೆ ಮಾಡಿತ್ತು. ದುಬಾರೆ ಅರಣ್ಯ ಶಿಬಿರದಲ್ಲಿ ಮೂರನೇ ಬಲಿಗೆ ಧಾಳಿ ನಡೆಸಿದರೂ ಅದೃಷ್ಟವಶಾತ್ ಮಾವುತ ನವೀನ್ ಪ್ರಾಣಾಪಾಯದಿಂದ ಪಾರಾಗಿದ್ದರು..

ಈ ಹಿಂದೆ ಸತ್ತವರಿಬ್ಬರೂ ಮದ್ಯ ಸೇವಿಸಿ ಅದರ ಬಳಿ ತೆರಳಿದಾಗ ಸಿಟ್ಟಿನಿಂದ ಅವರಿಬ್ಬರನ್ನೂ ಕೊಂದು ಹಾಕಿತ್ತು ಎಂದು ತೀರ್ಮಾನಕ್ಕೆ ಬರಲಾಗಿತ್ತು. ಆದರೆ, ಈ ಘಟನೆ ಬಳಿಕ ಕಾರ್ತಿಕ್‍ನ ಉಸ್ತುವಾರಿಗಾಗಿ ನೇಮಿಸಿದ್ದ ನವೀನ್ ಮದ್ಯಪಾನ ಮಾಡುತ್ತಿರಲಿಲ್ಲ. ಆದರೆ, ಆತನ ಮೇಲೆಯೂ ಆನೆ ಧಾಳಿ ಮಾಡಿದುದರಿಂದ ಬಳಿಕ ಆನೆಯನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಜೇನುನೊಣದ ಕಡಿತದ ಗಾಯ ಪತ್ತೆಯಾಯಿತು. ಗಾಯದ ನೋವನ್ನು ಸಹಿಸದಾದಾಗ ಆನೆ ಇಂತಹ ಧಾಳಿ ಮಾಡುತ್ತಿತ್ತು ಎಂದು ಬಯಲಾಯಿತು. ಆದರೆ, ಆನೆ ಕಾರ್ತಿಕ್ ಈ ಗಾಯದ ಸೋಂಕಿಗೆ ಇದೀಗ ತಾನೇ ಬಲಿಯಾಯಿತು.

ಕಾರ್ತಿಕ್ ದುಬಾರೆಯಲ್ಲಿಯೇ ಜನಿಸಿದ ಆನೆ ಮರಿಯಾಗಿತ್ತು. 1998 ರಲ್ಲಿ ವಿಜಯ ಎಂಬ ಹೆಣ್ಣು ಆನೆಯನ್ನು ಹಿಡಿದು ದುಬಾರೆಗೆ ತಂದು ಪಳಗಿಸಿ ಅಲ್ಲಿಯೇ ಇರಿಸಿಕೊಳ್ಳಲಾಗಿದೆ. ಈ ಆನೆ ಮೈಸೂರು ದಸರಾದಲ್ಲಿಯೂ ಪಾಲ್ಗೊಳ್ಳುತ್ತಿದೆ. ವಿಜಯ ಕಳೆದ 10 ವರ್ಷಗಳ ಹಿಂದೆ ದುಬಾರೆ ಆನೆ ಶಿಬಿರದಲ್ಲಿ ಹೆತ್ತ ಗಂಡು ಆನೆಯೇ ಈ ಕಾರ್ತಿಕ್. ಹೀಗಾಗಿ ಸಾಕು ಆನೆಗಳು ಮತ್ತು ಜನರ ನಡುವೆಯೇ ಬೆಳೆದು ಬಂದಿದ್ದ ಕಾರ್ತಿಕ್ 2017 ರಿಂದ ದಿಢೀರಾಗಿ ಆಗಿಂದಾಗ್ಗೆ ತನ್ನ ವರ್ತನೆಯಲ್ಲಿ ಬದಲಾವಣೆ ಗೊಳ್ಳುತ್ತಿದದ್ದು ಅರಣ್ಯ ಇಲಾಖೆಗೆ ಕಗ್ಗಂಟಾಗಿ ಪರಣಮಿಸಿತ್ತು. 2017 ರಲ್ಲಿ ಇಬ್ಬರನ್ನು ಕಾರ್ತಿಕ್ ಹತ್ಯೆ ಮಾಡಿದ ಬಳಿಕ ಅನೇಕ ತಿಂಗಳು ಆನೆ ಶಿಬಿರದ ‘ಕ್ರಾಲ್’ನಲ್ಲಿ ಬಂಧಿಸಿ ಇರಿಸಲಾಗಿತ್ತು. ಆ ಬಳಿಕ ಶಾಂತ ಸ್ವಭಾವ ಪ್ರದರ್ಶಿಸಿದ್ದ ಕಾರ್ತಿಕ್ ಆನೆಯನ್ನು ಇತ್ತೀಚೆಗಷ್ಟ್ಟೆ ‘ಕ್ರಾಲ್’ನಿಂದ ಬಂಧ ಮುಕ್ತಗೊಳಿಸಿ ಹೊರಕ್ಕೆ ಬಿಡಲಾಗಿತ್ತು . ಆದರೆ ಕೆಲವೇ ಅವಧಿಯಲ್ಲಿ ಮತ್ತೊಬ್ಬ ಮಾವುತನ ಮೇಲೆ ಧಾಳಿ ನಡೆದಿತ್ತು. ಇದೀಗ ಕಾರ್ತಿಕ್ ಶಾಶ್ವತ ಚಿರನಿದ್ರೆಗೆ ಜಾರಿದೆ.