ಗೋಣಿಕೊಪ್ಪ ವರದಿ, ಜ. 30 : ಅಖಿಲ ಅಮ್ಮಕೊಡವ ಸಮಾಜ ಹಾಗೂ ಬಾನಂಡ ಕುಟುಂಬ ಸಹಯೋಗದಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಬಾನಂಡ ಕ್ರಿಕೆಟ್ ಕಪ್ ಆಚರಣೆ ಪೂರ್ವಭಾವಿಯಾಗಿ ಮೈದಾನ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರು ಗಳಾದ ಬಾನಂಡ ಪ್ರಥ್ಯು, ಚಿಯಕ್ಪೂವಂಡ ಬೋಪಣ್ಣ ಮತ್ತು ಮಾಯಮುಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಲ್ಯಂಡ ಭವಾನಿ ಮೋಹನ್ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಅಮ್ಮಕೊಡವ ಜನಾಂಗದ ನಡುವೆ ನಡೆಯುವ 4 ನೇ ವರ್ಷದ ಕ್ರೀಡಾಕೂಟವನ್ನು ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದರಂತೆ ಮೇ 4 ಹಾಗೂ 5 ರಂದು ಕ್ರೀಡಾಕೂಟ ನಡೆಸಲಾಗುವುದು. ಮೈದಾನವನ್ನು ವಿಸ್ತರಿಸಿ ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ. ಇದರಂತೆ ತಾವು ಸೇರಿದಂತೆ, ಜಿ. ಪಂ. ಸದಸ್ಯ ಚಿಯಕ್ಪೂವಂಡ ಬೋಪಣ್ಣ ಅವರ ತಲಾ 1 ಲಕ್ಷ ಅನುದಾನದಲ್ಲಿ ಮೈದಾನ ವಿಸ್ತರಣೆ ಕಾರ್ಯ ನಡೆಸಲಾಗುವದು ಎಂದರು.
ಜಿ. ಪಂ. ಸದಸ್ಯ ಚಿಯಕ್ ಪೂವಂಡ ಬೋಪಣ್ಣ ಮಾತನಾಡಿ, ಗ್ರಾಮ ಮಟ್ಟದಲ್ಲಿ ಹೆಚ್ಚು ಕ್ರೀಡಾಕೂಟ ನಡೆಸಲು ಮೈದಾನ ಸದ್ಭಳಕೆಯಾಗ ಬೇಕಿದೆ. ಈ ನಿಟ್ಟಿನಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣಕ್ಕೂ ಚಿಂತನೆ ನಡೆಸಬೇಕು ಎಂದರು.
ಈ ಸಂದರ್ಭ ಬಾನಂಡ ಕುಟುಂಬ ಕಾರ್ಯದರ್ಶಿ ಪ್ರಕಾಶ್, ಖಜಾಂಜಿ ಸುದನ್, ಗ್ರಾಮದ ಪ್ರಮುಖರುಗಳಾದ ಕಾಳಪಂಡ ಟಿಪ್ಪು ಬಿದ್ದಪ್ಪ, ಚೆಪ್ಪುಡೀರ ಪ್ರದೀಪ್, ಆಪಟ್ಟೀರ ಪ್ರದೀಪ್, ಕಾಳಪಂಡ ಸುದೀರ್, ಟಾಟು ಮೊಣ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.