ಮಡಿಕೇರಿ, ಜ. 30: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದೊಂದಿಗೆ ಅಪಾರ ಆಸ್ತಿಪಾಸ್ತಿ ಹಾನಿಗೊಂಡು ಆರು ತಿಂಗಳು ಕಳೆದರೂ, ರಾಜ್ಯ ಸರಕಾರ ಅಸಡ್ಡೆಯೊಂದಿಗೆ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ವಿಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಂತ್ರಸ್ತರಿಗೆ ವಸತಿ ಸಹಿತ ಪರಿಹಾರ ಕಾರ್ಯ ಚುರುಕು ಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದೆ.ಕರ್ನಾಟಕ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ರಾಜ್ಯ ಬಿಜೆಪಿ ಪರವಾಗಿ ಇಂದು ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಕಲ್ಪಿಸಲಾಗುತ್ತಿರುವ ವಸತಿ ಯೋಜನೆಯೊಂದಿಗೆ, ಕೃಷಿಭೂಮಿ ಹಾಗೂ ಕಾಫಿ ತೋಟ ಸಹಿತ ನಷ್ಟದ ಬಗ್ಗೆ ಖುದ್ದು ಅಧ್ಯಯನ ನಡೆಸುವ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.840 ಮನೆ ನಿರ್ಮಾಣ : ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ 3849 ಮನೆಗಳ ಹಾನಿಯ ಬಗ್ಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದು, ಸರಕಾರದಿಂದ ಕೇವಲ 840 ಮನೆಗಳ ನಿರ್ಮಾಣಕ್ಕೆ

(ಮೊದಲ ಪುಟದಿಂದ) ಯೋಜನೆ ರೂಪಿಸಿದರೂ, ಇದುವರೆಗೆ ಒಂದು ಮನೆ ಕೂಡ ಪೂರ್ಣಗೊಳಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಎರಡು ತಿಂಗಳಲ್ಲಿ ಕೊಡಗಿನಲ್ಲಿ ಮಳೆ ಆರಂಭಗೊಳ್ಳಲಿದ್ದು, ಸರಕಾರ ಬೇಜವಾಬ್ದಾರಿತನ ತೋರುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

35 ಸಾವಿರ ಅರ್ಜಿ: ಪ್ರಾಕೃತಿಕ ವಿಕೋಪದಿಂದ ಕೃಷಿಭೂಮಿ, ತೋಟ ಕಳೆದುಕೊಂಡಿರುವ 35 ಸಾವಿರ ಕುಟುಂಬಗಳಿಗೆ ಸರಕಾರ ಇನ್ನೂ ಸಹಾಯ ಒದಗಿಸಿಲ್ಲವೆಂದು ಬೊಟ್ಟು ಮಾಡಿದ ಅವರು; 1277 ಮಂದಿಯ ಖಾತೆಗೆ ರೂ. 74 ಲಕ್ಷ ಹಣವನ್ನು ನೇರವಾಗಿ ಖಾತೆಗಳಿಗೆ ಸಂದಾಯ ಮಾಡಲಾಗಿದೆ ಎಂದು ಹೇಳುತ್ತಿದ್ದರೂ, ಜನತೆ ಹಣ ಸಿಕ್ಕಿಲ್ಲವೆಂದು ದೂರು ಹೇಳುತ್ತಿರುವದಾಗಿ ಶ್ರೀನಿವಾಸ ಪೂಜಾರಿ ಗಮನ ಸೆಳೆದರು.

ಸ್ಪಂದಿಸದ ಸರಕಾರ: ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮನೆಗಳನ್ನು ನಿರ್ಮಿಸಿಕೊಡಲು ಹಲವು ಸಂಘಸಂಸ್ಥೆಗಳು ಮುಂದಾಗಿದ್ದರು ಆ ನೆರವನ್ನು ಪಡೆಯುವಲ್ಲಿ ಸರ್ಕಾರ ತೀವ್ರ ನಿರ್ಲಕ್ಷ್ಯವನ್ನು ತೋರಿದೆ. ಪಲಿಮಾರು ಮಠಾಧೀಶರು 40 ಮನೆಗಳನ್ನು ಕಟ್ಟಿಕೊಡುವದಾಗಿ ಪತ್ರ ಬರೆದಿದ್ದಾರೆ. ಆದರೆ, ಅವರಿಗೆ ನೆರವಿನ ಹಣವನ್ನು ಸರ್ಕಾರಕ್ಕೆ ನೀಡಿ ಎಂದು ಉಡಾಫೆಯಿಂದ ಆಡಳಿತ ವ್ಯವಸ್ಥೆ ಉತ್ತರಿಸಿದೆ. ಇನ್ಫೋಸಿಸ್‍ನ ಸುಧಾ ಮೂರ್ತಿಯವರು 25 ಕೋಟಿ ರೂ. ವೆಚ್ಚದಲ್ಲಿ 250 ಮನೆಗಳನ್ನು ನಿರ್ಮಿಸಿಕೊಡುವದಾಗಿ ಹೇಳಿದ್ದರು. ಹೀಗಿದ್ದೂ, ಅವರಿಗೆ ಮನೆಗಳನ್ನು ನಿರ್ಮಿಸಲು ಕನಿಷ್ಟ ಸಮರ್ಪಕ ಜಾಗ ತೋರಿಸುವ ಕಾರ್ಯವನ್ನೂ ಮಾಡದೆ, ಅವರ ಕೊಡುಗೆಯನ್ನು ನಿರ್ಲಕ್ಷಿಸುವ ಕಾರ್ಯ ಸರ್ಕಾರದಿಂದ ನಡೆದಿದೆ. ಸೇವಾಭಾರತಿ ಸಂಘಟನೆ 40 ಮನೆಗಳನ್ನು ನಿರ್ಮಿಸಿಕೊಡಲು ಮುಂದೆ ಬಂದಿದ್ದರೂ ಸರ್ಕಾರ ಸ್ಪಂದಿಸಿಲ್ಲವೆಂದು ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಸಂಗ್ರಹ ವಾಗಿರುವ ನೆರವಿನ ಮೊತ್ತದ ಬಗ್ಗೆ ತಾನು ಮಾಹಿತಿಯನ್ನು ಪಡೆದಿದ್ದು, ಅದರಂತೆ 36 ಸಾವಿರ ಮಂದಿ 131.28 ಕೋಟಿ ಹಣವನ್ನು ನೀಡಿದ್ದು, ರಾಜ್ಯ ಸರ್ಕಾರಿ ನೌಕರರು 100 ಕೋಟಿ ನೆರವನ್ನು ನೀಡಿದ್ದಾರೆ. ಇದರಲ್ಲಿ ಯಾವದಕ್ಕೆ ಎಷ್ಟು ಹಣ ವೆಚ್ಚವಾಗಿದೆ ಎನ್ನುವದಕ್ಕೆ ಸರ್ಕಾರ ನೀಡಿರುವ ಮಾಹಿತಿಯಂತೆ 7.85 ಕೊಟಿ ರೂ.ಗಳನ್ನು ಸಂತ್ರಸ್ತರಿಗೆ ವಿತರಿಸಲು ಬಟ್ಟೆ, ಬೆಡ್‍ಶೀಟ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು, ಮನೆ ಬಾಡಿಗೆಗೆ 3.36 ಕೋಟಿ ಹಾಗೂ 75 ಕೋಟಿ ರೂ.ಗಳನ್ನು 840 ಮನೆಗಳ ನಿರ್ಮಾಣಕ್ಕೆ ಒದಗಿಸಲಾಗುವದೆಂದು ತಿಳಿಸಿದೆ. ಇವೆಲ್ಲ ಸೇರಿದರು ಸಾರ್ವಜನಿಕರು ನೀಡಿರುವ 131 ಕೋಟಿ ರೂ.ಗಳಿಗೆ ಸಮನಾಗುವದಿಲ್ಲ. ಅಲ್ಲದೆ ಇಷ್ಟೆಲ್ಲ ನೆರವು ದಾನಿಗಳಿಂದಲೇ ಬಂದಿದ್ದು, ಸರಕಾರದ ಕೊಡುಗೆಯಾದರು ಏನು ಎಂದು ಅವರು ಪ್ರಶ್ನಿಸಿದರು.

ಪ್ರಾಕೃತಿಕ ವಿಕೋಪದಿಂದ 35 ಸಾವಿರ ರೈತರ 1.40 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆÉ ಹಾನಿ ಸಂಭವಿಸಿದೆ. ಇವರಲ್ಲಿ 1277 ಕುಟುಂಬಗಳಿಗಷ್ಟೆ ಸರ್ಕಾರ 74 ಲಕ್ಷ ಪರಿಹಾರ ಒದಗಿಸಿದೆ. ಉಳಿದಂತೆ ಅಂದಾಜು 33 ಸಾವಿರಕ್ಕೂ ಹೆಚ್ಚಿನ ಮಂದಿಗೆ ಚಿಕ್ಕಾಸು ಪರಿಹಾರ ದೊರಕಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.

ನಿರ್ಲಕ್ಷ್ಯ ಸಹಿಸಲಾರದು: ಕೊಡಗಿನ ಸಂತ್ರಸ್ತರಿಗಾಗಿ ಸುಮಾರು 36 ಸಾವಿರ ದಾನಿಗಳು ರೂ. 131.28 ಕೋಟಿಗೂ ಅಧಿಕ ನೆರವು ನೀಡಿದ್ದರೂ, ಆ ಹಣವನ್ನು ಸದ್ಬಳಕೆ ಮಾಡಿಕೊಂಡಿಲ್ಲವೆಂದ ಅವರು, ಸರಕಾರದಿಂದ ಕೇಂದ್ರ ಅನುದಾನ ವನ್ನು ಕೂಡ ಸಂತ್ರಸ್ತರಿಗೆ ಕಲ್ಪಿಸಲು ಒಲವು ತೋರುತ್ತಿಲ್ಲ ವೆಂದರಲ್ಲದೆ, ಇನ್ನು ನಿರ್ಲಕ್ಷ್ಯತನ ಸಹಿಸಲಾಗದು ಎಂದು ಎಚ್ಚರಿಸಿದರು.

ಸದನದಲ್ಲಿ ಹೋರಾಟ: ಮೇಲ್ಮನೆ ಸದಸ್ಯೆ ತೇಜಸ್ವಿನಿ ಗೌಡ ಈ ವೇಳೆ ಮಾತನಾಡುತ್ತಾ, ಮಾಜೀ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದೆಲ್ಲೆಡೆ 11 ತಂಡಗಳಲ್ಲಿ ಅತಿವೃಷ್ಟಿ- ಬರ ಸಂಬಂಧ ಬಿಜೆಪಿ ಪ್ರಮುಖರು ಪರಿಶೀಲನೆ ನಡೆಸುತ್ತಿದ್ದು, ಕೊಡಗಿನಲ್ಲಿ ಸಂತ್ರಸ್ತರಿಗೆ ಸರಕಾರ ಸ್ಪಂದಿಸಿಲ್ಲವೆಂದು ಪ್ರವಾಸ ಸಂದರ್ಭ ಅರಿವಿಗೆ ಬಂದಿದ್ದಾಗಿ ಸ್ಪಷ್ಟಪಡಿಸಿದರು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟದೊಂದಿಗೆ ಕೊಡಗಿನ ಜನತೆಗೆ ನ್ಯಾಯ ದೊರಕಿಸಿ ಕೊಡಲಾಗುವದು ಎಂದು ಭರವಸೆ ನೀಡಿದರು.

ತನಿಖೆಗೆ ಆಗ್ರಹ : ಕೊಡಗಿನ ಸಂತ್ರಸ್ತರಿಗಾಗಿ ರಾಜ್ಯ ಸರಕಾರದಿಂದ ರೂ. 7.85 ಕೋಟಿ ವೆಚ್ಚದ ಕಂಬಳಿ ಇತ್ಯಾದಿ ಖರೀದಿಸಿ ಕೊಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಮಾಹಿತಿ ನೀಡಿದ್ದು, ದಾನಿಗಳ ಹೊರತಾಗಿ ಸರಕಾರ ಇಷ್ಟೊಂದು ಮೊತ್ತದ ಕಂಬಳಿ ಯಾರಿಗೆ ನೀಡಿದೆ ಎಂದು ತನಿಖೆ ಆಗಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಗೋಷ್ಠಿಯಲ್ಲಿ ಆಗ್ರಹಿಸಿದರು.

ಸಚಿವರ ವಿರುದ್ಧ ಟೀಕೆ: ಮಳೆಗಾಲದಲ್ಲಿ ಕೊಡಗಿನ ಗುತ್ತಿಗೆದಾರರು ಜನತೆಯ ಸಹಕಾರದಿಂದ ರಸ್ತೆಹಾನಿ ಸರಿಪಡಿಸಿದ್ದು, ಅವರುಗಳಿಗೆ ಹಣ ಒದಗಿಸದ ಜಿಲ್ಲಾ ಉಸ್ತುವಾರಿ ಸಚಿವರು ಕೆ.ಆರ್. ನಗರದ ಗುತ್ತಿಗೆದಾರರಿಗೆ ಇಲ್ಲಿ ಕೆಲಸದೊಂದಿಗೆ ಹಣ ಸಂಪಾದನೆಯ ದಾರಿ ಹಿಡಿದಿದ್ದು; ಇದೊಂದು ನಾಚೆಕೆಗೇಡಿನ ಬೆಳವಣಿಗೆ ಎಂದು ರಂಜನ್ ಆಕ್ರೋಶ ವ್ಯಕ್ತಪಡಿಸಿದರು.

ಆರು ತಿಂಗಳ ಅವಕಾಶ : ರಾಜ್ಯ ಸರಕಾರಕ್ಕೆ ಆರು ತಿಂಗಳ ಕಾಲಾವಕಾಶದೊಂದಿಗೆ ವಿಪಕ್ಷ ಬಿಜೆಪಿ ತಾಳ್ಮೆ ವಹಿಸಿದ್ದು; ಇನ್ನು ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವದು ಎಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಘೋಷಿಸಿದರು. ಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮೇಲ್ಮನೆ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮೊದಲಾದವರು ಹಾಜರಿದ್ದರು.