ಮಡಿಕೇರಿ, ಜ. 30: ಕಳೆದ ಆಗಸ್ಟ್‍ನಲ್ಲಿ ಎದುರಾಗಿದ್ದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜನತೆಗಾಗಿ, ದಾನಿಗಳಿಂದ ನೆರವಿನ ರೂಪದಲ್ಲಿ ಬಂದಿರುವ ರಾಶಿ ರಾಶಿ ವಸ್ತುಗಳು ವ್ಯರ್ಥಗೊಂಡು ಗೋದಾಮುವಿನಲ್ಲಿ ಬಿದ್ದಿರುವದ್ದನ್ನು ಕಂಡು ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವಕ್ಕಾಗಿ ಹೋದರು. ವಸ್ತುಗಳು ವ್ಯರ್ಥಗೊಂಡು ಗೋದಾಮುವಿನಲ್ಲಿ ಬಿದ್ದಿರುವದ್ದನ್ನು ಕಂಡು ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವಕ್ಕಾಗಿ ಹೋದರು. ಪತ್ರಿಕಾಗೋಷ್ಠಿಯಲ್ಲಿ ‘ಶಕ್ತಿ’ ಮೇಲಿನ ವಿಷಯವಾಗಿ ಮೇಲ್ಮನೆ ಪ್ರತಿಪಕ್ಷ ನಾಯಕರ ಗಮನ ಸೆಳೆಯಿತು.
ತಕ್ಷಣ ಸ್ಪಂದಿಸಿದ ಕೋಟಾ ಶ್ರೀನಿವಾಸ್ ಪೂಜಾರಿ ಸಹಿತ ಜನಪ್ರತಿನಿಧಿಗಳ ತಂಡ; ನಗರದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿರುವ ಸಂತ್ರಸ್ತರ ವಸ್ತುಗಳ ದಾಸ್ತಾನು ಇರಿಸಿರುವ ಗೋದಾಮುವಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಶಾಲಾ ಕಟ್ಟಡದ ಪ್ರವೇಶ ದ್ವಾರದ ಕೊಠಡಿಯೊಂದಲ್ಲಿ ರಾಶಿಗಟ್ಟಲೆ ಕಂಬಳಿಗಳು ಬಿದ್ದುಕೊಂಡಿರುವರು ಬೆಟ್ಟದಷ್ಟು ಎದುರಾಯಿತು. ಅದು ಕಂಡು ಅವಕ್ಕಾದ ಬಿಜೆಪಿ ನಾಯಕರು ದಾನಿಗಳ ಭಾವನೆಗೆ ಈ ರೀತಿ ಅಪಮಾನಿಸಲಾಗಿದೆ ಎಂದು ಉದ್ಗರಿಸಿದರು.ಇನ್ನೊಂದು ಕೊಠಡಿಯತ್ತ ಹೆಜ್ಜೆ ಇರಿಸಿದಾಗ, ಆ ಕೊಠಡಿ ತುಂಬಾ ಚಾಪೆಗಳು, ಜಮಾಖಾನೆಗಳು, ಇನ್ನಿತರ ವಸ್ತುಗಳ ದಾಸ್ತಾನು ಎದುರಾಯಿತು. ಮತ್ತೆ ಹೆಜ್ಜೆ ಮುಂದಿರಿಸಿದಾಗ ಆ ಕೋಣೆಯ ತುಂಬಾ ಅಕ್ಕಿ ಚೀಲಗಳು ರಾಶಿಗಟ್ಟಲೆ ಬಿದ್ದಿದ್ದು, ನಾಲ್ಕೈದು ತಿಂಗಳಿನಿಂದ ವ್ಯರ್ಥವಿರುವದು ಖಾತರಿಯಾಯಿತು. ಈ ಎಲ್ಲವನ್ನು ಗಮನಿಸಿ ಗದ್ಗರಿತರಾದ ಕೋಟಾ ಶ್ರೀನಿವಾಸ ಪೂಜಾರಿ, ದಾನಿಗಳು ಕಲ್ಪಿಸಿರುವ (ಮೊದಲ ಪುಟದಿಂದ) ನೆರವು ಕೊಡಗಿನ ಜನತೆಗೆ ಸದ್ಭಳಕೆಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ವಿಭಿನ್ನ ಅನುಭವ: ಹೀಗೆ ಕೊಠಡಿಯಿಂದ ಕೊಠಡಿಗೆ ತೆರಳಿ ಬಾಗಿಲು ತೆರೆದು ಒಳಹೊಕ್ಕು ನೋಡಲಾಗಿ, ಒಂದೆಡೆ ರಾಶಿಗಟ್ಟಲೆ ಶೂಗಳ ದಾಸ್ತಾನು, ಮತ್ತೊಂದು ಕೋಣೆಯಲ್ಲಿ ಅಷ್ಟೇ ಪ್ರಮಾಣದ ಸಾಬೂನು ಇತ್ಯಾದಿ ಕಂಡು ಬಂದರೆ, ಮುಂದಿನ ಕೋಣೆಯಲ್ಲಿ ಪೇಸ್ಟ್, ಬ್ರಸ್ ಇತ್ಯಾದಿ ಇತ್ತು; ಇನ್ನೊಂದು ಕೋಣೆ ತುಂಬಾ ಸ್ಟೀಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳೇ ತುಂಬಿಕೊಂಡಿದ್ದವು.
ಮುಂದೆ ಸಾಗಿದಾಗ ಸೀರೆ ಇತ್ಯಾದಿ ವಸ್ತುಗಳ ರಾಶಿ, ಇತರ ಗೃಹೋಪಯೋಗಿ ವಸ್ತುಗಳು, ಹೆಣ್ಣು ಮಕ್ಕಳಿಗೆ ಅಗತ್ಯ ಸಾಮಗ್ರಿ ಸಹಿತ ದಾನಿಗಳಿಂದ ಹರಿದು ಬಂದಿರುವ ನೆರವಿನ ರಾಶಿ ಸಂತ್ರಸ್ತ ಕುಟುಂಬಗಳಿಗೆ ವಿತರಣೆಗೊಂಡು, ಮಿಕ್ಕಿ ಉಳಿಯುವಂತಾಗಿದೆ ಎಂದು ಗೋದಾಮು ಉಸ್ತುವಾರಿ ಸಿಬ್ಬಂದಿ ಸುಳಿವು ನೀಡಿದರು. ಮಾತ್ರವಲ್ಲದೆ ಈಗಾಗಲೇ ಶಿಶು ಅಭಿವೃದ್ಧಿ ಇಲಾಖೆ ಮೂಲಕ ಅಂಗನವಾಡಿ, ಸಮಾಜ ಕಲ್ಯಾಣ ಇಲಾಖೆ ಅಧೀನ ವಸತಿ ನಿಲಯಗಳು, ವಿವಿಧ ವಸತಿ ಶಾಲೆಗಳು, ಆಶ್ರಮ ಶಾಲೆಗಳು, ಗಿರಿಜನ ಹಾಡಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ ಎಂದು ಮಾಹಿತಿಯಿತ್ತರು.
ಆ ಹೊರತಾಗಿಯೂ ರಾಶಿ ರಾಶಿ ದಾಸ್ತಾನು ಕಂಡು ಕೊಡಗಿನಲ್ಲಿ ಎದುರಾಗಿದ್ದ ಪ್ರಾಕೃತಿಕ ವಿಕೋಪ ಸಂದರ್ಭ ಅಪಾರ ನೆರವು ದಾನಿಗಳಿಂದ ಬಂದಿದ್ದಾಗಿ ಕೋಟಾ ಶ್ರೀನಿವಾಸ ಪೂಜಾರಿ ಬೊಟ್ಟು ಮಾಡಿದರು. ಅಲ್ಲದೆ, ಕುಂದಾಪುರ ಹಾಗೂ ಇತರೆಡೆಗಳಿಂದ ಲಾರಿಗಟ್ಟಲೆ ವಸ್ತುಗಳನ್ನು ಕೊಡಗಿನ ಹಲವೆಡೆ ಬೇಡವೆಂದು ವಾಪಾಸು ಕಳುಹಿಸಿದ್ದಾಗಿ ನೆನಪಿಸಿದರು.
ಈ ಎಲ್ಲಾ ಬೆಳವಣಿಗೆ ನಡುವೆ ರಾಜ್ಯದ ಮುಖ್ಯಮಂತ್ರಿ ಕಾರ್ಯಾಲಯದಿಂದ; ದಾನಿಗಳ ನೆರವಿನ ನಿಧಿಯಿಂದ ಸರಕಾರ ರೂ. 7.85 ಕೋಟಿ ಮೊತ್ತದ ಕಂಬಳಿ ಇತ್ಯಾದಿ ಖರೀದಿಸಿರುವದಾಗಿ ತಮಗೆ ಮಾಹಿತಿ ನೀಡಿದ್ದು, ಅದು ಯಾರಿಗಾಗಿ ಮತ್ತು ಏತಕ್ಕಾಗಿ ಎಂದು ಅಚ್ಚರಿಯ ನೋಟ ಬೀರಿದರು. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.
ಯಾರೂ ನೋಡಿಲ್ಲವೆ?: ಅಪಾರ ಪ್ರಮಾಣದಲ್ಲಿ ಸಂತ್ರಸ್ತರಿಗಾಗಿ ಹರಿದು ಬಂದಿರುವ ನೆರವು ವ್ಯರ್ಥಗೊಂಡಿರುವ ಬಗ್ಗೆ ಬೇಸರಗೊಂಡ ವಿಪಕ್ಷ ನಾಯಕರು, ಈ ದಿಸೆಯಲ್ಲಿ ತಾವುಗಳು ನೋಡಲಿಲ್ಲವೆ? ಎಂದು ಜತೆಯಲ್ಲಿದ್ದ ಜಿಲ್ಲೆಯ ಶಾಸಕರು, ಜಿ.ಪಂ. ಪ್ರತಿನಿಧಿಗಳನ್ನು ಪ್ರಶ್ನಿಸಿದರು. ಇಲ್ಲವೆಂದು ಸ್ಥಳೀಯ ಜನಪ್ರತಿನಿಧಿಗಳು ತಲೆಯಾಡಿಸಿದರು.
ಅಧಿಕಾರಿಗಳು ಅವಶ್ಯ: ಈಗಿನ ಸ್ಥಿತಿಯಲ್ಲಿ ಕೊಡಗಿಗೆ ಖಾಯಂ ಜಿಲ್ಲಾಧಿಕಾರಿಗಳ ಸಹಿತ ಖಾಲಿ ಇರುವ ಇತರ ಹುದ್ದೆಗಳನ್ನು ಸರಕಾರ ತಕ್ಷಣದಿಂದ ಭರ್ತಿಗೊಳಿಸಬೇಕಿದೆ; ಆ ಹೊರತು ಕೆಲಸಗಳನ್ನು ಚುರುಕುಗೊಳಿಸಲು ಸಾಧ್ಯವಿಲ್ಲವೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು. ಈ ಬಗ್ಗೆ ಎಲ್ಲರೊಡಗೂಡಿ ಮುಖ್ಯಮಂತ್ರಿಗಳನ್ನು ಒತ್ತಾಯಿಸೋಣ ಎಂದು ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದರು. ತಪ್ಪಿದಲ್ಲಿ ಬಿಜೆಪಿಯಿಂದ ಹೋರಾಟ ಅನಿವಾರ್ಯವೆಂದು ಮೇಲ್ಮನೆ ಸದಸ್ಯೆ ತೇಜಸ್ವಿನಿ ತಿಳಿಸಿದರು. ಇಷ್ಟು ಸಮಯವನ್ನು ಸರಕಾರ ಅರಿತು ಕೆಲಸ ಮಾಡಲೆಂದು ತಾವು ಸುಮ್ಮನಿರಬೇಕಾಯಿತು ಎಂದು ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿದರು.
ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರ ಸಹಿತ ಬಿಜೆಪಿ ಜಿಲ್ಲಾಧ್ಯಕ್ಷರು, ಪ್ರಮುಖರು ಗೋದಾಮು ವೀಕ್ಷಣೆ ಬಳಿಕ ಗ್ರಾಮೀಣ ಜನತೆ ಹಾಗೂ ಬಡವರಿಗೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ದಾಸ್ತಾನು ಹಂಚುವಂತೆ ಜಿಲ್ಲಾಧಿಕಾರಿ ಬಳಿ ಕೋರುವಂತೆ ಚರ್ಚೆಯಲ್ಲಿ ತೊಡಗಿದ್ದರು.