ಗೋಣಿಕೊಪ್ಪ ವರದಿ, ಜ. 31: ಇಲ್ಲಿನ 1ನೇ ವಿಭಾಗದ ಅಂಗನವಾಡಿ ಕೇಂದ್ರಕ್ಕೆ ಗೋಣಿಕೊಪ್ಪ ರೋಟರಿ ಸಂಸ್ಥೆ ಹಾಗೂ ಶೇರಿಂಗ್ ಅಬಾಂಡೆನ್ಸ್ ಸಂಸ್ಥೆ ಸಹಯೋಗದಲ್ಲಿ ಆಶಾಸ್ಪೂರ್ತಿ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಉಪಯೋಗವಾಗುವಂತಹ ಬಳಕೆ ವಸ್ತುಗಳನ್ನು ನೀಡಲಾಯಿತು.

ಸ್ವಚ್ಛತೆಗಾಗಿ ನೆಲಹಾಸು ಮ್ಯಾಟ್, ಕುಡಿಯುವ ನೀರಿನ ಫಿಲ್ಟರ್, ಮಕ್ಕಳ ಆಟಿಕೆ, ಕುರ್ಚಿ, ಟೇಬಲ್ ಇಂತಹವುಗಳನ್ನು ವಿತರಿಸಲಾಯಿತು.

ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ ಮಾತನಾಡಿ, ಖಾಸಗಿ ಶಿಶು ವಿಹಾರಗಳಲ್ಲಿ ಮಕ್ಕಳಿಗೆ ದೊರೆಯುವ ಗುಣಮಟ್ಟದ ಪೂರಕ ವಾತಾವರಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಿಸುವ ಉದ್ದೇಶದಂತೆ ಮಕ್ಕಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ. ರೋಟರಿ ಸಂಸ್ಥೆ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ, ರೋಟರಿ ಮಾಜಿ ಅಧ್ಯಕ್ಷರುಗಳಾದ ಕೊಕ್ಕಂಡ ಕಾವೇರಪ್ಪ, ಎಂ.ಜಿ. ಮೋಹನ್, ಸದಸ್ಯರುಗಳಾದ ಪ್ರಮೋದ್ ಕಾಮತ್, ನರೇನ್, ಶೇರಿಂಗ್ ಅಬಾಂಡೆನ್ಸ್ ಸಂಸ್ಥೆ ಪ್ರಮುಖರುಗಳಾದ ಪಟ್ಟು ಉತ್ತಯ್ಯ, ರಬೀನಾ, ಜೀವನ್ ಉಪಸ್ಥಿತರಿದ್ದರು.