ಮಡಿಕೇರಿ, ಜ. 31: ಕಡಗದಾಳುವಿನ ಕಾರ್ನರ್ ಫ್ರೆಂಡ್ಸ್ ವತಿಯಿಂದ 5ನೇ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ತಾ. 2 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾರ್ನರ್ ಫ್ರೆಂಡ್ಸ್‍ನ ಗೌರವಾಧ್ಯಕ್ಷ ಎಸ್.ಯು. ಜಲೀಲ್ ಅವರು, ಪಂದ್ಯಾವಳಿ ಕಡಗದಾಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಇದರಲ್ಲಿ 16 ರಿಂದ 18 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ತಂಡದಲ್ಲಿ ಇಬ್ಬರು ಅತಿಥಿ ಆಟಗಾರರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಪಂದ್ಯಾವಳಿಯು ಅಂದು ಸಂಜೆ 4 ಗಂಟೆಗೆ ಆರಂಭವಾಗಲಿದ್ದು, ಭಾಗವಹಿಸುವ ತಂಡಗಳು ಅಂದು ಅಪರಾಹ್ನ 2 ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿಜೇತ ತಂಡಕ್ಕೆ 17,777 ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ತಂಡಕ್ಕೆ 11,111 ರೂ. ನಗದು ಹಾಗೂ ಟ್ರೋಫಿ, ಉತ್ತಮ ಆಲ್ ರೌಂಡರ್ ಮತ್ತು ಉತ್ತಮ ಹೊಡೆತಗಾರರಿಗೆ ತಲಾ 1 ಸಾವಿರ ರೂ.ಗಳ ನಗದು ಹಾಗೂ ಟ್ರೋಫಿ ನೀಡಲಾಗುವದು ಎಂದರು.
ಆಸಕ್ತ ತಂಡಗಳು ಹೆಚ್ಚಿನ ವಿವರಗಳಿಗೆ ಮೊ.8861350952, 9480084330ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಪಂದ್ಯಾವಳಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ವಿ. ಚೇತನ್ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಹಾಗೂ ಮಡಿಕೇರಿ ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದಿನು ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ನರ್ ಫ್ರೆಂಡ್ಸ್ ಅಧ್ಯಕ್ಷ ದಿನು ಸೋಮಣ್ಣ, ಖಜಾಂಚಿ ಎ.ಕೆ. ಪುನೀತ್, ಸದಸ್ಯರಾದ ಹೆಚ್.ವಿ. ಹರೀಶ್ ಹಾಗೂ ಟಿ.ಜನಾರ್ಧನ್ ಉಪಸ್ಥಿತರಿದ್ದರು.