ವೀರಾಜಪೇಟೆ, ಜ. 31: ಮಡಿಕೇರಿಯ ಭೂಮಾಪನ ಸಹಾಯಕ ನಿರ್ದೇಶಕರನ್ನು ಕೊಡಗು ಜಿಲ್ಲೆಯಿಂದ ವರ್ಗಾಯಿಸುವಂತೆ ಆಗ್ರಹಿಸಿ ವೀರಾಜಪೇಟೆ ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ಹಾಗೂ ಅಮ್ಮತ್ತಿ ರೈತ ಸಂಘದ ವತಿಯಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.

ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಅಧ್ಯಕ್ಷ ಕೆ.ಎಂ. ಕುಶಾಲಪ್ಪ, ತಾಲೂಕಿನಲ್ಲಿ ಭೂ ದಾಖಲೆ ಸರ್ವೆಗೆ ಇತರ ಕಡತಗಳಿಗೆ ಸಂಬಂಧಿಸಿದಂತೆ ಭೂ ಮಾಪನ ಸಹಾಯ ನಿರ್ದೇಶಕರು, ರೈತರು ಹಿಡುವಳಿದಾರರು ಕಚೇರಿಗೆ ತೆರಳಿದಾಗ ಸಲ್ಲದ ಸಬೂಬು ನೀಡುತ್ತಿದ್ದಾರೆ. ತಾಲೂಕಿನಾದ್ಯಂತ ರೈತರು ಭೂ ಹಿಡುವಳಿದಾರರಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಸಾವಿರಾರು ಕಡತಗಳು ಬಾಕಿ ಉಳಿದುಕೊಂಡಿವೆ. ಇವರನ್ನು ಮೇಲಧಿಕಾರಿಯವರು ತಕ್ಷಣ ವರ್ಗಾಯಿಸಬೇಕೆಂದು ಆಗ್ರಹಿಸಿದರು. ನಂತರ ತಾಲೂಕು ತಹಶೀಲ್ದಾರ್ ಬಿ.ಎಂ. ಗೋವಿಂದರಾಜ್ ಅವರಿಗೆ ಮನವಿ ಸಲ್ಲಿಸಿದರು. ಬೆಳಿಗ್ಗೆ 10.30 ಗಂಟೆಗೆ ಆರಂಭವಾದ ಪ್ರತಿಭಟನೆ ಅಪರಾಹ್ನ 1 ಗಂಟೆಗೆ ಅಂತ್ಯಗೊಂಡಿತು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ಅವರು ಸಂಘಟನೆಯ ಮನವಿಯನ್ನು ಪರಿಶೀಲಿಸಿದರಲ್ಲದೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯ ಹೇರುವದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ, ಎಂ. ಸುರೇಶ್, ಎ. ತಂಗಮ್ಮ, ಹಸೈನಾರ್, ಎಂ.ಬಿ. ಲೋಕೇಶ್ ಬಿ.ಬಿ. ಮಾಚಯ್ಯ ಮತ್ತಿತರರು ಹಾಜರಿದ್ದರು.