ಮಡಿಕೇರಿ, ಜ.31: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ಗುರುವಾರ ಮಾದಾಪುರದ ವಿವಿಧ ತಂಬಾಕು ಅಂಗಡಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿದರು.

ಪಾನ್ ಶಾಪ್, ಹೊಟೇಲ್, ಕಿರಾಣಿ ಅಂಗಡಿಗಳ ಮೇಲೆ ಕೋಟ್ಪಾ ಕಾಯ್ದೆಯಡಿ ಧಾಳಿ ನಡೆಸಲಾಯಿತು. ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಗುಡ್ಕಾ ಪ್ಯಾಕೆಟ್‍ಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಿರುವದು ಕಂಡುಬಂದು, ಇದಕ್ಕೆ ಕಡಿವಾಣ ಹಾಕಲು ಅಂಗಡಿಗಳ ಮಾಲೀಕರಿಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡಲಾಯಿತು. ಕಾನೂನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಯಿತು.

ಹೊಟೇಲ್, ಬಾರ್, ಅಂಗಡಿ ಮತ್ತು ಪಾನ್‍ಶಾಪ್‍ಗಳಲ್ಲಿ ತಂಬಾಕು ಸೇವನೆ ಹಾಗೂ ಧೂಮಪಾನ ನಿಷೇಧದ (ಸೆಕ್ಷನ್ 4) ಮತ್ತು 18 ವಯಸ್ಸಿನ ಒಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವದು ಅಪರಾಧ (ಸೆಕ್ಷನ್ 6ಎ) ಬಗ್ಗೆ ನಾಮಫಲಕ ಹಾಕುವದು ಕಡ್ಡಾಯ ಎಂದು ತಿಳಿಸಿದರು.

ಈ ಧಾಳಿಯಲ್ಲಿ ಪುನೀತ ರಾಣಿ ಜಿಲ್ಲಾ ಸಲಹೆಗಾರರು, ಮಂಜುನಾಥ್ ಆರ್ ಸಮಾಜ ಕಾರ್ಯಕರ್ತರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಹೇಶ್ ಹೆಲ್ತ್ ಇನ್ಸ್‍ಪೆಕ್ಟರ್ ಸೋಮವಾರಪೇಟೆ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು.