ಸಿದ್ದಾಪುರ, ಜ.31: ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿದ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುವವರನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸುವಂತೆ ಎಸ್‍ಡಿಪಿಐ ಆಗ್ರಹಿಸಿದೆ.
ಗಾಂಧಿ ಹುತಾತ್ಮ ದಿನದಂದು ಆಲಿಘಡ್‍ನಲ್ಲಿ ಹಿಂದೂ ಮಹಾಸಭೆಯ ಕಾರ್ಯಕರ್ತರು ಹಾಗೂ ಗೋಡ್ಸೆ ಪರ ಘೋಷಣೆಗಳನ್ನು ಕೂಗಿ ಪ್ರತಿಮೆಗೆ ಮಾಲಾರ್ಪಣೆ ನಡೆಸಿರುವ ಘಟನೆಯನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಇಲ್ಲಿಯ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿದರು. ಗೋಡ್ಸೆ ಹಾಗೂ ಹಿಂದೂ ಮಹಾಸಭಾ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಗೋಡ್ಸೆಯ ಪ್ರತಿಕೃತಿಯನ್ನು ನೇಣಿಗೇರಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಸ್ತಫ ಇವರುಗಳು ಮಾತನಾಡಿ, ದೇಶದ ಭದ್ರತೆಯ ಹಿತದೃಷ್ಟಿಯಿಂದ ಈ ಸಂಘಟನೆಯ ಎಲ್ಲಾ ನಾಯಕರುಗಳನ್ನು ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶೌಕತ್ ಅಲಿ, ಹಸ್ಸನ್, ಸಂಶೀರ್, ಬಶೀರ್ ಸೇರಿದಂತೆ ಇತರರು ಇದ್ದರು.