ಗೋಣಿಕೊಪ್ಪಲು, ಜ. 31: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷ ಅವಧಿಗೆ ಅಧ್ಯಕ್ಷರಾಗಿ ಅಳಮೇಂಗಡ ಎ.ವಿವೇಕ್ ದ್ವಿತೀಯ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಇದೇ ಪ್ರಥಮ ಬಾರಿಗೆ ಕುಂಜ್ಞಿಮಾಡ ಸಿ. ಮುತ್ತಪ್ಪ (ಹರೀಶ್) ಆಯ್ಕೆಯಾಗಿದ್ದಾರೆ.
ಕಾನೂರು ಸಹಕಾರ ಬ್ಯಾಂಕ್‍ನ ಒಟ್ಟು 13 ನಿರ್ದೇಶಕ ಸ್ಥಾನದಲ್ಲಿ 9 ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.
ಕಾನೂರು ಬ್ಯಾಂಕ್‍ಗೆ 50 ಎಕರೆ ಕಾಫಿ ತೋಟ ಹಾಗೂ ಸುಮಾರು ಮೂರುವರೆ ಎಕರೆ ನಿವೇಶನವಿದ್ದು, ವಿಜಯಾ ಬ್ಯಾಂಕ್ ಶಾಖೆಯೂ ಇವರದ್ದೇ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ವಾರ್ಷಿಕ ಇದೀಗ ರೂ.65 ಲಕ್ಷ ಲಾಭಗಳಿಸುತ್ತಿದ್ದು, ಮುಂದಿನ ಅವಧಿಯಲ್ಲಿ ಬ್ಯಾಂಕ್ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುನೀಡಲಾಗುವದು ಎಂದು ವಿವೇಕ್ ನುಡಿದರು.
ಸದರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗ್ರಾಹಕರ ಸೇವೆಗೆ ಮೊದಲ ಆದ್ಯತೆ ನೀಡಿದ್ದು ಹತ್ಯಾರು ವಿಭಾಗ, ಆಹಾರ ಶಾಖೆ, ರಸಗೊಬ್ಬರ ಶಾಖೆ, ಬಟ್ಟೆ ವಿಭಾಗ, ಕೀಟನಾಶಕ ಶಾಖೆ ಇತ್ಯಾದಿ ಶಾಖೆಗಳನ್ನು ಲಾಭ ದಾಯಕವಾಗಿ ಮುನ್ನಡೆಸುತ್ತಾ ಬಂದಿರುವದಾಗಿ ಅವರು ಮಾಹಿತಿ ನೀಡಿದರು.