ಕೂಡಿಗೆ, ಜ. 31: ಇಲ್ಲಿನ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಶಾಲಾ ವೇದಿಕೆ ಉದ್ಘಾಟನಾ ಸಮಾರಂಭ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಾಗೂ ಶಾಲಾ ನೂತನ ವೇದಿಕೆಯನ್ನು ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗುಮ್ಮನಕೊಲ್ಲಿ ಶಾಲೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆಯ ಕೊರತೆಯಿದ್ದ ಕಾರಣ ಇಲ್ಲಿನ ಶಾಲಾ ಸಮಿತಿ ಹಾಗೂ ಸ್ಥಳೀಯ ಸಾರ್ವಜನಿಕರು ನನ್ನ ಗಮನಕ್ಕೆ ತಂದ ಹಿನ್ನೆಲೆ ಜಿ.ಪಂ. ವತಿಯಿಂದ ವೇದಿಕೆಯನ್ನು ನಿರ್ಮಿಸಲಾಗಿದೆ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ವೇದಿಕೆ ಸಹಕಾರಿಯಾಗಲಿದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ಲೋಕೇಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು. ಸಹ ಶಿಕ್ಷಕಿ ನಳಿನಿ ಪ್ರಸಕ್ತ ವರ್ಷದ ವರದಿ ವಾಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಹಶಿಕ್ಷಕ ಬಸವರಾಜು ನಿರ್ವಹಿಸಿದರು. ತಾರಾ ವಂದಿಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾದ ಮಣಿ, ಕಿಶೋರ್, ಗಣಪತಿ, ಮನು, ಆಸಿಫ್, ಅನುದೀಪ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸವಿತ, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಗಣಪತಿ, ಎಸ್.ಡಿ.ಎಂ.ಸಿ. ಸದಸ್ಯರಾದ ಜಯರಾಮ, ಶ್ರೇಯ, ಕಲಾವತಿ, ಕಾವ್ಯ, ವೀಣಾ, ಶಿಕ್ಷಕ ವೃಂದದವರಾದ ಶಾಂತಿ, ಅಶ್ವಿನಿ, ಮಮತಾ ಹಾಗೂ ಪೋಷಕರು ಇದ್ದರು. ಸಂಜೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.