ಗೋಣಿಕೊಪ್ಪ ವರದಿ, ಜ. 31: ನೊಕ್ಯಾ ಗ್ರಾಮದಲ್ಲಿ ಗ್ರಾಮಸ್ಥರು ಸೂಚಿಸುವ ಜಾಗದ ಮೂಲಕವೇ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವದು ಎಂದು ಸಿಸಿಎಫ್ ಲಿಂಗರಾಜು ಭರವಸೆ ನೀಡಿದರು.

ತಿತಿಮತಿ ಎಸಿಎಫ್ ಕಚೇರಿಯಲ್ಲಿ ರೈತಸಂಘದ ಪ್ರಮುಖರೊಂದಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಯೋಜನೆ ಅನುಷ್ಟಾನ ಕುರಿತು ನಡೆದ ಸಭೆಯಲ್ಲಿ ಗ್ರಾಮಸ್ಥರು ಸೂಚಿಸುವ ಜಾಗದಲ್ಲಿ ಕಂಬಿ ಅಳವಡಿಸಲಾಗುವದು ಎಂದು ತಿಳಿಸಿದರು.

ರೈತ ಸಂಘ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಈ ಮಾರ್ಗವನ್ನು ತಡೆ ಮಾಡಿದರೆ ನೊಕ್ಯ, ದೇವರಪುರ, ಕಲ್ತೋಡು, ಮಾಯಮುಡಿ, ಕೋಣನಕಟ್ಟೆ, ಬಾಳಾಜಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಕಾಡಾನೆ ನುಸುಳಲು ಆಗುವದಿಲ್ಲ. ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಅರಣ್ಯ ಇಲಾಖೆ ಬೇರೆ ಮಾರ್ಗದಲ್ಲಿ ಕಂಬಿ ಅಳವಡಿಸದೆ ಗ್ರಾಮದ ಜನರಿಗೆ ಉಪಯುಕ್ತವಾಗುವಂತೆ ಸ್ಫಂದಿಸಬೇಕು ಎಂದರು.

ನೊಕ್ಯ ಗ್ರಾಮದ ಕುಂಞÂರಾಮನ ಕಟ್ಟೆ ಮೂಲಕ ಜಂಗಲಾಡಿ ಮಾರ್ಗದಲ್ಲಿ ಕಾಡಾನೆ ನುಸುಳುತ್ತಿದ್ದರೂ, ಅರಣ್ಯ ಇಲಾಖೆ ಮಾರ್ಗ ಬದಲಿಸಿ ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತಿದೆ ಎಂದು ಆರೋಪಿಸಿ ರೈತಸಂಘ ಮಂಗಳವಾರ ಪ್ರತಿಭಟನೆ ನಡೆಸಿತ್ತು. ಇದರಂತೆ ಸಿಸಿಎಫ್ ವಿಶೇಷ ಸಭೆ ನಡೆಸಿ ಪರಿಹಾರಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭ ಎಸಿಎಫ್ ಪ್ರಸನ್ನ ಕುಮಾರ್ ರೈತ ಸಂಘ ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಶ್,ಪ್ರಮುಖರುಗಳಾದ ಚೆಪ್ಪುಡೀರ ಕಾರ್ಯಪ್ಪ, ಅಜ್ಜಮಾಡ ಚೆಂಗಪ್ಪ, ಮಂಡೆಪಂಡ ಪ್ರವೀಣ್, ರಂಜನ್ ಉಪಸ್ಥಿತರಿದ್ದರು.

ಕೆಜಿಬಿ ಭೇಟಿ

ತಿತಿಮತಿ ಭಾಗದ ಅರಣ್ಯದ ಅಂಚಿನಲ್ಲಿ ರೈಲು ಕಂಬಿ ಅಳವಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿತು. ಆದರೆ, ರೈಲ್ವೆ ಕಂಬಿ ಅಳವಡಿಕೆಯಲ್ಲಿ ಮಾರ್ಗ ಬದಲಾಯಿಸಿರುವ ಬಗ್ಗೆ ಹಸಿರು ಸೇನೆ, ರಾಜ ರೈತ ಸಂಘ, ಮುಖಂಡರು ಜಂಗಲ್ ಹಾಡಿಯ ಅರಣ್ಯದ ಅಂಚಿನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ಜಿ. ಬೋಪಯ್ಯ ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಪ್ರಮುಖರಾದ ಚೆಪ್ಪುಡೀರ ಕಾರ್ಯಪ್ಪ, ಚಕ್ಕೇರ ಬೆಳ್ಳಿಯಪ್ಪ, ಚೆಪ್ಪಡೀರ ರಂಜನ್, ಹೆಚ್.ಟಿ. ಉಮೇಶ್, ಮಲ್ಲಂಗಡ ಸನ್ನಿ, ಕರುಣಾಕರ, ಚೆಪ್ಪುಡೀರ ಮಾಚಯ್ಯ ಹಾಜರಿದ್ದರು.

- ಸುದ್ದಿಪುತ್ರ/ ಎನ್.ಎನ್. ದಿನೇಶ್.