ಮಡಿಕೇರಿ, ಜ. 31: ಬೆಂಗಳೂರಿನಂತಹ ಮಹಾನಗರಿಗೆ ಹೋಲಿಸಿದರೆ ಕೊಡಗು ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ಸಣ್ಣ ನಗರವಾದರೂ ಇಲ್ಲಿನ ಟ್ರಾಫಿಕ್ ಕಿರಿಕಿರಿ ಒಮ್ಮೊಮ್ಮೆ ರಾಜಧಾನಿಯ ಪರಿಸ್ಥಿತಿಯನ್ನು ನೆನಪಿಸುತ್ತದೆ. ನಗರ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಇರುವದು ನಿಲುಗಡೆಯಲ್ಲೂ ಸೂಕ್ತ ನಿಯಂತ್ರಣ ಗಳಿಲ್ಲದೆ ಇರುವದು, ಸ್ಥಳಾವಕಾಶ, ಪರ್ಯಾಯ ಮಾರ್ಗಗಳ ಅಲಭ್ಯತೆ, ಆಗಿಂದಾಗ್ಗೆ ನಡೆಯುವ ರಸ್ತೆ ತಡೆ, ಪ್ರತಿಭಟನೆಗಳು, ಇವೆಲ್ಲದರ ನಡುವೆ ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನದಂತಹ ಕಾರಣಗಳಿಂದ ಮಡಿಕೇರಿ ನಗರದಲ್ಲಿ ಕಿರಿಕಿರಿ ಎಲ್ಲರಿಗೂ ಅರಿವಿದೆ.

ಇರುವ ಹಲವಾರು ಸಮಸ್ಯೆಗಳ ನಡುವೆ ಸಂಚಾರ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಇದೀಗ ಪೊಲೀಸ್ ಇಲಾಖೆ ತನ್ನಿಂದಾದ ಪ್ರಯತ್ನಕ್ಕೆ ಇಳಿದಿದೆ. ನಗರ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ಇಲಾಖೆ ಹಲವು ನಿಯಂತ್ರಣಗಳೊಂದಿಗೆ ವಾಹನಗಳ ಓಡಾಟ-ನಿಲುಗಡೆಯನ್ನು ಸರಿಪಡಿಸಲು ಮುಂದಾಗಿದ್ದು, ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ನಗರದ ಅನುಭವಿಗಳಿಂದ ಸೂಕ್ತ ಸಲಹೆ ಗಳಿದ್ದಲ್ಲಿ ಅದನ್ನೂ ಪರಿಗಣಿಸ ಲಾಗುವದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್, ಡಿವೈಎಸ್‍ಪಿ ಸುಂದರ್‍ರಾಜ್ ಅವರುಗಳ ಮಾರ್ಗದರ್ಶನ ಹಾಗೂ ಮುತುವರ್ಜಿಯಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆಯನ್ನು ಹೆಚ್ಚು ಸಮಸ್ಯೆಯಾಗದಂತೆ ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಟ್ರಾಫಿಕ್ ಸಿಗ್ನಲ್ ಎಂಬದು ಇಲ್ಲ. ಹಲವು ವರ್ಷಗಳ ಹಿಂದೆ ಮಡಿಕೇರಿಯ ಇಂದಿರಾಗಾಂಧಿ ವೃತ್ತ (ಐ.ಜಿ. ಸರ್ಕಲ್)ದಲ್ಲಿ ಒಂದು ಟ್ರಾಫಿಕ್ ಲೈಟ್ ವ್ಯವಸ್ಥೆಯನ್ನು ಮಾಡಲಾಗಿತ್ತಾದರೂ ಇಲ್ಲಿನ ಹವಾಮಾನದ ಪರಿಸ್ಥಿತಿ ಯಿಂದಾಗಿ ಇದು ಮುಂದುವರಿದಿಲ್ಲ. ಇದೀಗ ಕುಶಾಲನಗರದಲ್ಲಿ ಒಂದು ಟ್ರಾಫಿಕ್ ಸಿಗ್ನಲ್ ಲೈಟ್ ಇತ್ತೀಚೆಗಷ್ಟೆ ಅಳವಡಿಸಲ್ಪಟ್ಟಿರುವದು ಹೊರತು ಪಡಿಸಿದರೆ ಕೊಡಗು ಜಿಲ್ಲೆಯ ಸಂಚಾರ ವ್ಯವಸ್ಥೆಯನ್ನು ಇಲಾಖಾ ಸಿಬ್ಬಂದಿಗಳು ಖುದ್ದಾಗಿ ವ್ಯಕ್ತಿಗತ ವಾಗಿಯೇ ನಿಭಾಯಿಸ ಬೇಕಾಗಿದೆ. ಇದನ್ನು ಜಿಲ್ಲೆಯ ಜನತೆಯೊಂದಿಗೆ ಜಿಲ್ಲೆಗೆ ಆಗಮಿಸುವ ಇತರರೂ ಅರಿತುಕೊಂಡು ನಡೆಯುವಂತೆ ಅನೂಪ್ ಮಾದಪ್ಪ ಹಾಗೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಡಿಕೇರಿಯಲ್ಲಿ ಇದೀಗ...

ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಿಂದ ಐ.ಜಿ. ವೃತ್ತದ ತನಕ ಕೋನ್ ಅಳವಡಿಸಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಕಾಲೇಜು ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಪೈಯಿಂಟ್ ಮಾಡಲಾಗಿದ್ದು, ಸ್ಥಳ ಗುರುತು ಮಾಡಲಾಗಿದೆ. ದ್ವಿಪಥ ರಸ್ತೆಯನ್ನು ಅಂಚೆ ಕಚೇರಿ, ಪೊಲೀಸ್ ಠಾಣೆಯ ತನಕವೂ ಮುಂದುವರಿಸ ಲಾಗುವದು. ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ‘ಜೀಬ್ರಾ’ ಮಾರ್ಕ್ ಹಾಕುವ ಕ್ರಮವನ್ನೂ ಜಾರಿಗೆ ತರಲಾಗುತ್ತಿದೆ. ದೇವಸ್ಥಾನ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಚತುಷ್ಚಕ್ರ ವಾಹನಗಳನ್ನು ಪ್ರತ್ಯೇಕವಾಗಿ ನಿಲುಗಡೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಎಎಸ್‍ಐ ಮಹದೇವ್ ಹಾಗೂ ಸಿಬ್ಬಂದಿಗಳು (ಮೊದಲ ಪುಟದಿಂದ) ಈ ವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ.

ಜನರಲ್ ತಿಮ್ಮಯ್ಯ ವೃತ್ತದಲ್ಲಿಯೂ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವದನ್ನು ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಲಾಗುವದು ಎಂದು ಅನೂಪ್ ಮಾದಪ್ಪ ‘ಶಕ್ತಿ’ಗೆ ವಿವರಿಸಿದ್ದಾರೆ. ವಾಹನಗಳಲ್ಲಿ ಟಿಂಟೆಡ್ ಗ್ಲಾಸ್‍ಗಳಿದ್ದಲ್ಲಿ ಅಂತಹ ಸ್ಟಿಕ್ಕರ್‍ಗಳನ್ನು ಬಿಚ್ಚಿಸಿ ದಂಡ ವಿಧಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಿರ್ದಿಷ್ಟ ಪಾಯಿಂಟ್‍ಗಳಲ್ಲಿ ಈಗಿನ ವ್ಯವಸ್ಥೆಯಂತೆ ನಿಯೋಜಿತ ಸಿಬ್ಬಂದಿಗಳು ಕರ್ತವ್ಯದಲ್ಲಿರುತ್ತಾರೆ. ಇವರೊಂದಿಗೆ ಸವಾರರು ಸಹಕರಿಸಬೇಕು ಎಂದು ಹೇಳಿರುವ ಅವರು ಅಗತ್ಯವಿರುವೆಡೆ ಮಾರ್ಗ ಸೂಚನಾ ಫಲಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆಗಳಿಂದ ಒಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸರಿಪಡಿಸಲು ನಗರಸಭೆಗೆ ಮನವಿ ಮಾಡಲಾಗುವದು ಎಂದು ತಿಳಿಸಿರುವ ಅವರು, ಹಲವು ಅಂಗಡಿಗಳ ಮುಂದೆ ಚೈನ್ ಅಳವಡಿಸಿ ವಾಹನ ನಿಲುಗಡೆಗೆ ಅವಕಾಶ ನೀಡದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಇಂತಹ ಪ್ರಕರಣದ ಬಗ್ಗೆಯೂ ಗಮನ ಹರಿಸಿ ವಾಹನ ನಿಲುಗಡೆಗೆ ಅವಕಾಶ ಇರುವ ಸ್ಥಳಗಳಲ್ಲಿ ಈ ರೀತಿ ಮಾಡುತ್ತಿದ್ದರೆ ಅದನ್ನು ತೆರವುಗೊಳಿಸಲಾಗುವದು ಎಂದು ತಿಳಿಸಿದ್ದಾರೆ.

ನಿಯಮ ಬಾಹಿರವಾಗಿ ಶಬ್ಧ ಮಾಡುವಂತಹ ವಾಹನಗಳ ವಿರುದ್ಧವೂ ಕ್ರಮ ಜರುಗಿಸಲಾಗುವದು. ವಾಹನ ಮಾಲೀಕರು, ಚಾಲಕರು ವ್ಯವಸ್ಥೆಗಳನ್ನು ಪಾಲಿಸುವ ಮೂಲಕ ಇಲಾಖೆಗೆ ಸಹಕರಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರೂ ಸೂಚಿಸಿದ್ದಾರೆ.