ಸೋಮವಾರಪೇಟೆ, ಜ. 31: ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿರುವ ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ತಾ. 6 ರಿಂದ 8ರವರೆಗೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನ ದೇವಾಲಯದ ಲೋಕಾರ್ಪಣೆ ನೆರವೇರಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಾಂತಯ್ಯ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ರೂ. 40ಲಕ್ಷ ವೆಚ್ಚದಲ್ಲಿ ನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಕಾರ್ಕಳದಿಂದ ನಂದಿ, ಕನ್ನಂಬಾಡಿ ಅಮ್ಮ, ಗಣಪತಿ ವಿಗ್ರಹಗಳನ್ನು ತರಲಾಗಿದೆ. ತಾ. 6 ರಂದು ಬೆಳಿಗ್ಗೆ 10 ಗಂಟೆಯಿಂದ ಗಂಗಾಪೂಜೆ, ಮಂಗಳವಾದ್ಯ, ವೀರಗಾಸೆಯೊಂದಿಗೆ ನೂತನ ಶಿಲಾಮೂರ್ತಿಗಳ ಗ್ರಾಮ ಪ್ರದಕ್ಷಿಣೆ, ಮಹಾ ಗಣಪತಿ ಪೂಜೆ, ವಾಸ್ತುಪೂಜೆ, ದ್ವಾರಪೂಜೆ, ಪುಣ್ಯಾಹ, ನಾಂದಿ, ಪಂಚಕಳಸ, ರಕ್ಷಾಬಂಧನ, ಅಂಕುರಾರೋಪಣ, ನವಗ್ರಹ, ಮೃತ್ಯುಂಜಯ, ಪಂಚಕಳಸ ಸ್ಥಾಪನೆ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದರು. ತಾ. 7 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ನೂತನ ಪ್ರತಿಷ್ಠಾಪಿತ ವಿಗ್ರಹಗಳಿಗೆ ಪ್ರಾಣಪ್ರತಿಷ್ಠೆ, ರುದ್ರಾಭಿಷೇಕ, ಹೋಮ, ಮಹಾಪೂರ್ಣಾಹುತಿ, ರಕ್ಷಾಧಾರಣೆ, ಮಹಾಕುಂಭಾಭಿಷೇಕ, ಮಹಾಬಲಿ, ಅಷ್ಟೋತ್ತರ, ಮಹಾಮಂಗಳಾರತಿ ನೆರವೇರಲಿದೆ ಎಂದು ಮಾಹಿತಿ ಒದಗಿಸಿದರು.

ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪೂಜಾ ವಿಧಿವಿಧಾನಗಳು ನಡೆಯಲಿವೆ. ತಾ. 7 ರಂದು ಬೆಳಿಗ್ಗೆ 5 ರಿಂದ 8 ಗಂಟೆಯವರೆಗೆ ವೀರಶೈವ ವಟುಗಳಿಗೆ ಶಿವಧೀಕ್ಷಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪೂರ್ವಾಹ್ನ 10 ಗಂಟೆಗೆ ನೂತನ ದೇವಾಲಯದ ಉದ್ಘಾಟನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ನೂತನ ದೇವಾಲಯವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಿರಕ್ತ ಮಠಾಧೀಶ ಶ್ರೀ ವಿಶ್ವೇಶ್ವರ ಸ್ವಾಮೀಜಿ, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ. ಜೀವಿಜಯ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧಿಪತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ತಾ. 8 ರಂದು ಪೂರ್ವಾಹ್ನ 9 ರಿಂದ 12 ಗಂಟೆಯವರೆಗೆ ನೂತನ ಪ್ರತಿಷ್ಠಾಪಿತ ಕನ್ನಂಬಾಡಿ ಅಮ್ಮನವರಿಗೆ ಉಡಿ ತುಂಬುವ ಕಾರ್ಯ ಜರುಗಲಿದ್ದು, ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ದೇವಾಲಯದಲ್ಲಿ 3 ದಿನಗಳ ಕಾಲ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಜಯರಾಜ್, ಜಂಟಿ ಕಾರ್ಯದರ್ಶಿ ಜಿ.ಬಿ. ಶಂಕರಪ್ಪ, ಖಜಾಂಚಿ ದಯಾನಂದ್, ಸದಸ್ಯರಾದ ನಿವೃತ್ತ ಪ್ರೊ. ಸಿ.ಎಂ. ಧರ್ಮಪ್ಪ ಅವರುಗಳು ಉಪಸ್ಥಿತರಿದ್ದರು.