ಸೋಮವಾರಪೇಟೆ, ಜ.31: ಈ ಕುಟುಂಬಕ್ಕೆ ಬೆರಳಚ್ಚೇ ಸಮಸ್ಯೆ. ಸರ್ಕಾರವಂತೂ ಬಹುತೇಕ ಯೋಜನೆಗಳಿಗೆ ಆಧಾರ್ ಕಾರ್ಡ್ ಜತೆಯಲ್ಲಿ ಬೆರಳಚ್ಚು ನೀಡುವದನ್ನೂ ಕಡ್ಡಾಯಗೊಳಿಸಿರುವದರಿಂದ ಈ ಕುಟುಂಬ ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ ಹೊರಗುಳಿಯುವಂತಾಗಿದೆ.

ಕಡು ಬಡವರಿಗೆ ನೀಡಲ್ಪಡುವ ಅಂತ್ಯೋದಯ ಕಾರ್ಡ್ ಹೊಂದಿರುವ ಆಲೇಕಟ್ಟೆಯ ಮೊಹಿದ್ದೀನ್ ಕುಟುಂಬ ಕಳೆದ 4 ತಿಂಗಳಿನಿಂದ ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ ಹೊರಗುಳಿದಿದೆ. ಕಾರಣ ಈ ಕುಟುಂಬ ಸದಸ್ಯರ ಬೆರಳಚ್ಚು ‘ಬಯೋಮೆಟ್ರಿಕ್’ನಲ್ಲಿ ಹೊಂದಾಣಿಕೆಯಾಗುತ್ತಿಲ್ಲ.

ಮೊಹಿದ್ದೀನ್ ಕುಟುಂಬದ ಪಡಿತರ ಚೀಟಿಯಲ್ಲಿ ಅವರ ಪತ್ನಿ ಖತೀಜಾ ಮತ್ತು ಮಗಳು ಜಮೀಲಾ ಅವರುಗಳ ಹೆಸರಿದ್ದು, ಮೂವರ ಬೆರಳಚ್ಚು ಸಹ ಬಯೋಮೆಟ್ರಿಕ್‍ನಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಪಡಿತರ ವ್ಯವಸ್ಥೆಯಿಂದ ಈ ಬಡ ಕುಟುಂಬ ವಂಚಿತವಾಗಿದ್ದು, ಕುಟುಂಬದ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ.

ಚೌಡ್ಲು ನ್ಯಾಯಬೆಲೆ ಅಂಗಡಿಯಲ್ಲಿ ಈ ಬಗ್ಗೆ ವಿಚಾರಿಸಿದರೆ, ಬೆರಳಚ್ಚು ಇಲ್ಲದೇ ಇರುವದರಿಂದ ಪಡಿತರ ನೀಡಲು ಸಾಧ್ಯವಾಗುವದಿಲ್ಲ. ಬಯೋಮೆಟ್ರಿಕ್‍ನಲ್ಲಿ ಬೆರಳಚ್ಚು ಸ್ವೀಕೃತಗೊಂಡರೆ ಮಾತ್ರ ಅಕ್ಕಿ ನೀಡಲಾಗುವದು ಎಂದು ತಿಳಿಸಿ ಸಾಗಹಾಕಿದ್ದಾರೆ.

ತಾಲೂಕು ಆಹಾರ ಇಲಾಖಾ ಕಚೇರಿಯಲ್ಲಿ ವಿಚಾರಿಸಿದರೆ ನ್ಯಾಯಬೆಲೆ ಅಂಗಡಿಯಿಂದ ಬರೆಸಿಕೊಂಡು ಬನ್ನಿ ಎನ್ನುತ್ತಿದ್ದಾರೆ. ಒಟ್ಟಾರೆ ವಯೋವೃದ್ಧರಾಗಿರುವ ಮೊಹಿದ್ದೀನ್ ದಂಪತಿ, ವ್ಯವಹಾರಿಕ ಜ್ಞಾನವನ್ನು ಅಷ್ಟಾಗಿ ಹೊಂದಿಲ್ಲದ ಮಗಳು ಜಮೀಲಾ ಅವರುಗಳು ಎಲ್ಲಿಗೆ ಹೋಗಬೇಕು? ಯಾರನ್ನು ಕೇಳಬೇಕು? ಎಂಬ ಬಗ್ಗೆ ತಿಳಿಯದೇ 4 ತಿಂಗಳಿನಿಂದಲೂ ಸುಮ್ಮನಾಗಿದ್ದಾರೆ.

ವಯೋವೃದ್ಧರಾಗಿರುವ ದಂಪತಿಗಳು ಓಡಾಡುವದೇ ಕಷ್ಟಕರವಾಗಿದೆ. ಮಗಳಿಗೂ ಅಷ್ಟಾಗಿ ವ್ಯವಹಾರ ಜ್ಞಾನವಿಲ್ಲ. ಈ ಪರಿಸ್ಥಿತಿಯಲ್ಲಿ ಅಂತ್ಯೋದಯ ಕಾರ್ಡ್ ಇದ್ದರೂ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಬೆರಳಚ್ಚು. ಬಯೋಮೆಟ್ರಿಕ್‍ನಲ್ಲಿ ಬೆರಳಚ್ಚು ಹೊಂದಾಣಿಕೆಯಾಗುತ್ತಿಲ್ಲ ಎಂದು ನ್ಯಾಯಬೆಲೆ ಅಂಗಡಿಯವರು ತಿಳಿಸುತ್ತಿದ್ದಾರೆಯೇ ಹೊರತು, ಇದನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಕುಟುಂಬ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

ಮೊಹಿದ್ದೀನ್ ಕುಟುಂಬ ಸಂಕಷ್ಟದಲ್ಲಿದ್ದು, ಸರ್ಕಾರ ಯೋಜನೆಯಿಂದ ವಂಚಿತವಾಗಿದೆ. ಇಂತಹ ಸಂದರ್ಭಗಳಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ, ಸರ್ಕಾರದಿಂದ ದೊರಕುವ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಚೌಡ್ಲು ಗ್ರಾಮದ ಚಂದನ ಸುಬ್ರಮಣಿ ಒತ್ತಾಯಿಸಿದ್ದಾರೆ.

ಇದರೊಂದಿಗೆ ಸರ್ಕಾರದಿಂದ ಬರುತ್ತಿದ್ದ ವೃದ್ಧಾಪ್ಯ ವೇತನವೂ ಸ್ಥಗಿತಗೊಂಡಿದ್ದು, ಮೊಹಿದ್ದೀನ್ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ. ಕೆಲಸಕ್ಕೆ ತೆರಳಲೂ ಅಶಕ್ತವಾಗಿರುವ ಹಿನ್ನೆಲೆ ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ. ತಕ್ಷಣ ಸಂಬಂಧಿಸಿದ ಆಹಾರ ಇಲಾಖಾ ಅಧಿಕಾರಿಗಳು ಈ ಕುಟುಂಬದ ಬೆರಳಚ್ಚು ಸಮಸ್ಯೆಯನ್ನು ನಿವಾರಿಸಿ, ಸರ್ಕಾರದ ಯೋಜನೆಯ ನಿಜವಾದ ಫಲಾನುಭವಿಗೆ, ಪಡಿತರ ಲಭಿಸುವಂತಹ ವ್ಯವಸ್ಥೆ ಮಾಡಬೇಕಿದೆ.

ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಆಹಾರ ಇಲಾಖಾ ನಿರೀಕ್ಷಕ ಶಿವನಂಜಯ್ಯ ಅವರು, ಮೊಹಿದ್ದೀನ್ ಕುಟುಂಬಕ್ಕೆ ನೀಡಿರುವ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‍ನ್ನು ಪರಿಶೀಲಿಸ ಲಾಗುವದು. ದೋಷವಿದ್ದಲ್ಲಿ ಸಮಸ್ಯೆ ಪರಿಹರಿಸಲಾಗುವದು ಎಂದು ಭರವಸೆ ನೀಡಿದ್ದಾರೆ.

- ವಿಜಯ್ ಹಾನಗಲ್