ಮಡಿಕೇರಿ, ಜ. 31: ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ‘ಚೆಸ್ಕಾಂ’ನಿಂದ ಸಾಧ್ಯವಿರುವ ಮಟ್ಟಿಗೆ ಪರಿಹಾರ ಕಲ್ಪಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವದು ಎಂದು ಇಲಾಖೆಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಭರವಸೆ ನೀಡಿದ್ದಾರೆ. ಇಂದು ಇಲ್ಲಿನ ಚೆಸ್ಕಾಂ ಉಪ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡು ತ್ತಿದ್ದರು.
ಗ್ರಾಹಕರು ಚೆಸ್ಕಾಂಗೆ ಸಕಾಲದಲ್ಲಿ ವಿದ್ಯುತ್ ಬಳಕೆಯ ಸಂಬಂಧ ಬಿಲ್ ಮೊತ್ತವನ್ನು ಪಾವತಿಸುವ ಮುಖಾಂತರ, ದೈನಂದಿನ ತೊಂದರೆ ಗಳ ಬಗ್ಗೆ ಸಿಬ್ಬಂದಿ ಸ್ಪಂದಿಸದಿದ್ದರೆ ನೇರವಾಗಿ ಅಧಿಕಾರಿಗಳಿಗೆ ಗಮನಕ್ಕೆ ತರುವಂತೆ ತಿಳಿಹೇಳಿದರು. ಉಚಿತವಾಗಿ ಲಭ್ಯವಿರುವ ಸಾಕಷ್ಟು ಸೇವೆಯನ್ನು ಗ್ರಾಹಕರಿಗೆ ಒದಗಿಸಲಾಗುವದು ಎಂದ ಅವರು, ಇಲಾಖೆಯ ನಿಯಮ ಹಾಗೂ ಸರಕಾರದ ನೀತಿಯಂತೆ ಉಳಿದ ಕೆಲಸ ಅಥವಾ ವಿದ್ಯುತ್ ಸಲಕರಣೆಗಳನ್ನು ಹಣ ಪಾವತಿಸಿ ನಿರ್ವಹಿಸಿಕೊಡ ಲಾಗುವದು ಎಂದು ಸ್ಪಷ್ಟಪಡಿಸಿದರು.
ಬಿಲ್ ಗೊಂದಲ: ಎಷ್ಟೋ ಸಂದರ್ಭಗಳಲ್ಲಿ ಗ್ರಾಹಕರು ಬಿಲ್ ಹಣವನ್ನು ಸಕಾಲದಲ್ಲಿ ಪಾವತಿಸದಿದ್ದರೆ, ಅನಿವಾರ್ಯವಾಗಿ ಸಂಪರ್ಕ ಕಡಿತಗೊಳಿಸುತ್ತಿದ್ದು, ಒಮ್ಮಿಂದೊಮ್ಮೆಲೇ ಇಂತಹ ಕೆಲಸಕ್ಕೆ ಮುಂದಾಗುವದಿಲ್ಲವೆಂದು ಅವರು ನೆನಪಿಸಿದರು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹಳೆಯ ಕಂಬಗಳ ಬದಲಾವಣೆ ಇತ್ಯಾದಿಗೂ ಕೂಡ ಸಂಬಂಧಪಟ್ಟವರು ಹಣ ಪಾವತಿಸಿ ರಶೀತಿ ಪಡೆಯುವ ಮೂಲಕ ಕೆಲಸ ಮಾಡಿಸಿಕೊಳ್ಳಲು ಅವಕಾಶವಿದೆ ಎಂದರು.
ಪಂಪ್‍ಸೆಟ್ ಬಿಲ್: ಕೆಲವೆಡೆ ಗ್ರಾಹಕರು ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಹೊಂದಿದ್ದು, ಅವುಗಳನ್ನು ಉಪಯೋಗಿಸದಿದ್ದರೂ ಬಿಲ್ ಪಾವತಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಮಜಾಯಿಷಿಕೆ ನೀಡಿದ ಅಧಿಕಾರಿ, ಗ್ರಾಹಕರು ಪಡೆದಿರುವ ಯಾವದೇ ಸೌಲಭ್ಯಕ್ಕೆ, ವಿದ್ಯುತ್ ಬಳಸದಿದ್ದರೂ ಕನಿಷ್ಟ ಹಣವನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಕಟ್ಟಬೇಕಿದೆ ಎಂದು ಸ್ಪಷ್ಟೀಕರಣವಿತ್ತರು.
ವಿನಾಯಿತಿ ಬೇಡಿಕೆ: ಅಲ್ಲದೆ ರಾಜ್ಯ ಸರಕಾರ ಕಬ್ಬು ಬೆಳೆಗಾರರಿಗೆ ವಿದ್ಯುತ್ ಬಳಕೆಗೆ ವಿನಾಯಿತಿ ಕಲ್ಪಿಸುವಂತೆ, ಕಾಫಿ ತೋಟಗಳಿಗೂ ನೀರು ಹಾಯಿಸಲು ಮೋಟಾರು ಪಂಪ್‍ಸೆಟ್‍ಗಳಿಗೆ ವಿದ್ಯುತ್ ವಿನಾಯಿತಿ ನೀಡಬೇಕೆಂಬ ಬೇಡಿಕೆಗೆ, ಆ ಬಗ್ಗೆ ಸರಕಾರದೊಂದಿಗೆ ವ್ಯವಹರಿಸಲು ಸಲಹೆ ನೀಡಿದರು.
ತಾ.5ರಂದು ಸಭೆ
ಮೈಸೂರಿನಲ್ಲಿ ತಾ.5ರಂದು ವಿದ್ಯುತ್ ದರ ಪರಿಷ್ಕರಣೆ ಸಂಬಂಧ ಮೈಸೂರಿನಲ್ಲಿ ವಿಭಾಗಮಟ್ಟದ ಸಭೆಯಿದ್ದು, ಕೊಡಗಿನ ಗ್ರಾಹಕರು ಜಿಲ್ಲೆಯ ಹಂತದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಆ ಸಭೆಗೆ ತೆರಳಿ ಮೇಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಗಮನ ಸೆಳೆಯುವ ಅವಕಾಶವಿದೆ ಎಂದು ಸೋಮಶೇಖರ್ ಮರು ಸಲಹೆ ನೀಡಿದರು.
ವಿವಿಧ ಸಮಸ್ಯೆ: ಮೂರ್ನಾಡು ವ್ಯಾಪ್ತಿಯಲ್ಲಿ ಕೇವಲ 25 ಕೆ.ವಿ. ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನಿಂದ ಸಮಸ್ಯೆಯಾಗಿದ್ದು, 66 ಕೆವಿ ವ್ಯವಸ್ಥೆ ಕಲ್ಪಿಸಬೇಕೆಂದು ಎಂ. ರಾಜಾ ಮಾದಪ್ಪ ಗಮನ ಸೆಳೆದರು. ಸಂಪಾಜೆಯಲ್ಲಿ ವಿದ್ಯುತ್ ಕಂಬ ತಂತಿಗಳು ಮನೆಗಳ ಬಳಿ ಕೈಗೆಟುಕುವಂತೆ ಹಾದುಹೋಗಿದ್ದು, ಅಂತಹ ಕಂಬದ ತೆರವಿಗೆ ತಿರಮಲ ಸೋನಾ ಆಗ್ರಹಿಸಿದರು. ನಗರದ ರಾಣಿಪೇಟೆ ಹಾಗೂ ಇತರೆಡೆಯ ಸಮಸ್ಯೆಗಳ ಬಗ್ಗೆಯೂ ಗ್ರಾಹಕರು ಗಮನ ಸೆಳೆದರು.
ಕಂಬ ತೆರವಿಗೆ ಬೇಡಿಕೆ : ನಗರದ ಕೈಗಾರಿಕಾ ಬಡಾವಣೆಯ ಸರಕಾರಿ ಮುದ್ರಣಾಲಯ ಬಳಿ ರಸ್ತೆ ಬದಿ ಅಪಾಯಕಾರಿ ವಿದ್ಯುತ್ ಕಂಬವಿದ್ದು, ವಾಹನ ದಟ್ಟಣೆ ನಡುವೆ ಹಾನಿ ಸಂಭವಿಸುವ ಮುನ್ನ ಅದನ್ನು ತೆರವುಗೊಳಿಸಬೇಕೆಂಬ ಆಗ್ರಹ ಕೇಳಿಬಂತು. ಇತ್ತ ತುರ್ತು ಕ್ರಮ ಕೈಗೊಳ್ಳಲಾಗುವದು ಎಂದು ಅಧಿಕಾರಿ ಭರವಸೆ ನೀಡಿದರು.
ಸಭೆಯಲ್ಲಿ ಇಲಾಖೆ ಅಧಿಕಾರಿಗಳಾದ ದೇವಯ್ಯ, ಸಂಪತ್ ಸೇರಿದಂತೆ ವಿವಿಧ ಹೋಬಳಿ ಅಧಿಕಾರಿಗಳು ಹಾಜರಿದ್ದು, ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸುತ್ತಿದ್ದರು.