ಮಡಿಕೇರಿ, ಜ. 31: ಸಾಹಿತ್ಯ ಪ್ರೇಮಿ ಪೆರಾಜೆ ಜಿಎಂಪಿ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದ ಕೇಶವ ಪೆರಾಜೆ (58) ಅವರು ತಾ. 31 ರಂದು ನಿಧನರಾದರು.

ಮಡಿಕೇರಿಯ ಮಂಗಳಾದೇವಿ ನಗರದ ನಿವಾಸಿಯಾಗಿದ್ದ ಕೇಶವ ಪೆರಾಜೆ ಅವÀರು ಬೆಳಿಗ್ಗೆ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯದ ಯಾವದೇ ಜಿಲ್ಲೆಯಲ್ಲಿ ನಡೆದರೂ ಆ ಸಮ್ಮೇಳನಗಳಿಗೆ ಕೇಶವ ಪೆರಾಜೆ ಹಾಜರಾಗುತ್ತಿದ್ದರು. ಪ್ರತಿನಿಧಿ ಶುಲ್ಕ ಪಾವತಿಸಿ ಸಾಮಾನ್ಯ ಪ್ರತಿನಿಧಿಯಾಗಿ ಜೀವನದ ಉದ್ದಕ್ಕೂ ಸಾಹಿತ್ಯದ ಸವಿಯನ್ನುಂಡಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣವನ್ನು ತಪ್ಪದೆ ಸಂಗ್ರಹಿಸುತ್ತಿದ್ದರು. ಉತ್ತಮ ಬರಹಗಾರ ರಾಗಿದ್ದ ಕೇಶವ ಪೆರಾಜೆ ಯಕ್ಷಗಾನ ಕಲಾವಿದರೂ ಆಗಿದ್ದರು.

ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನÀದಲ್ಲಿ ಪುಸ್ತಕ ಮಳಿಗೆ ಸಮಿತಿ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ತಾಲೂಕು ಕಸಾಪದ ಮಾಜಿ ಅಧ್ಯಕ್ಷ ಕೆ.ಟಿ. ಬೇಬಿಮ್ಯಾಥ್ಯು, ಕೊಡಗು ಲೇಖಕ ಕಲಾವಿದರ ಬಳಗದ ಸ್ಥಾಪಕ ಅಧ್ಯಕ್ಷ ಬಿ.ಎ. ಷಂಶುದ್ದೀನ್, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಜಿಲ್ಲಾ ಲೇಖಕ ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಪ್ರಧಾನ ಕಾರ್ಯದರ್ಶಿ ವಿಲ್‍ಫ್ರೆಡ್ ಕ್ರಾಸ್ತ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಆದಿಪರಾಶಕ್ತಿ ಯುವಕ ಸಂಘದ ಅಧ್ಯಕ್ಷ ಉಜ್ವಲ್ ರಂಜಿತ್ ಅವರುಗಳು ಕೇಶವ ಪೆರಾಜೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮೃತರು ಹಿರಿಯ ಸಾಹಿತಿಗಳಾದ ಡಾ. ಮಾದವ ಪೆರಾಜೆ ಅವರ ಸಹೋದರರಾಗಿದ್ದಾರೆ.