ಶನಿವಾರಸಂತೆ, ಜ. 31: ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಕೋಶಾಧಿಕಾರಿ ಎಸ್.ಎ. ಮುರಳಿಧರ್ ಅಭಿಪ್ರಾಯಪಟ್ಟರು.

ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ಹೋಬಳಿ ಘಟಕದ ವತಿಯಿಂದ ನಡೆದ ಸುಲೋಚನ ಡಾ. ಎಂ.ಬಿ. ನಾಗರಾಜ್ ದಂಪತಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ಉತ್ತಮ ಕೃತಿಗಳ ಕೊಡುಗೆ ನೀಡಿದ್ದರೇ ಮಾಧ್ಯಮ ಕ್ಷೇತ್ರ ತನ್ನದೇ ಆದ ಛಾಪನ್ನು ಮೂಡಿಸಿ ಮಾದರಿಯಾಗಿದೆ. ಶತಮಾನಗಳ ಹಿಂದೆಯೆ ‘ಕೊಡಗು ಚಂದ್ರಿಕೆ’ ಎಂಬ ದಿನಪತ್ರಿಕೆ ಶನಿವಾರಸಂತೆಯಲ್ಲಿ ಆರಂಭವಾಗಿ ಮಾಧ್ಯಮ ಬೆಳವಣಿಗೆಗೆ ನಾಂದಿ ಹಾಡಿತ್ತು. ಜಿಲ್ಲೆಯಲ್ಲಿಂದು ಹಲವಾರು ಪತ್ರಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಮಾಧ್ಯಮ ಕ್ಷೇತ್ರಕ್ಕೆ ಮಾದರಿಯಾಗಿವೆ ಎಂದರು.

ದೇಶದ 3 ಸೇನಾ ದಳಗಳಿಗೆ ಏಕೈಕ ಪ್ರಥಮ ಮಹಾ ದಂಡನಾಯಕ ರಾಗಿ ಸೇವೆ ಸಲ್ಲಿಸಿ ವಿಶ್ವದೆಲ್ಲೆಡೆ ಕೀರ್ತಿ ಪತಾಕೆ ಹಾರಿಸಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನಿಸಿದ್ದು, ಶನಿವಾರಸಂತೆ ಯಲ್ಲಿ ಇವರ ಹಾಗೆಯೇ ಜನರಲ್ ತಿಮ್ಮಯ್ಯ ಇತರ ಸೇನಾ ನಾಯಕರನ್ನು ಕೊಡುಗೆ ನೀಡಿದ ಕೊಡಗು ಜಿಲ್ಲೆ ಸೈನಿಕರ ತವರೂರು. ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿದರೆ ಕೊಡಗಿನ ಜನ ಹೆಮ್ಮೆಪಡುತ್ತಾರೆ ಎಂದು ಮುರಳಿಧರ್ ಹೇಳಿದರು.

ನಿವೃತ್ತ ಪ್ರಾಂಶುಪಾಲ ಸಿ.ಎಂ. ಧರ್ಮಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ. ವಚನ ಸಾಹಿತ್ಯದ ಮೂಲಕ ಬಸವಣ್ಣ, ಅಕ್ಕಮಹಾದೇವಿ ಮತಗ್ತಿತರ ವಚನಕಾರರು ಸಮಾಜ ಸುಧಾರಣೆಯ ಕಾಯಕ ಮಾಡಿದರು. ಸರಳ, ಸುಂದರ ಕನ್ನಡದ ಮೂಲಕ ವಚನ ಸಾಹಿತ್ಯ ಸಾಮಾಜಿಕ ಚಿಂತನೆ ನಡೆದಿದೆ ಎಂದರು.

ಕಸಾಪ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಂ. ಆನಂದ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಜಗನ್‍ಪಾಲ್, ನಿರ್ದೇಶಕರಾದ ಅರುಣ್, ರಂಗಸ್ವಾಮಿ, ಪ್ರಾಂಶುಪಾಲ ಈ.ಎಂ. ದಯಾನಂದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಕಸಾಪ ಹೋಬಳಿ ಘಟಕದ ಕಾರ್ಯ ದರ್ಶಿ ಕೆ.ಪಿ. ಜಯಕುಮಾರ್, ಪ್ರಮು ಖರಾದ ಕೃಷ್ಣರಾಜ್, ನಾಗರಾಜ್, ಡಿ.ಬಿ. ಸೋಮಪ್ಪ, ರಾಮ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.