ಶನಿವಾರಸಂತೆ, ಜ. 31: ಶ್ರೇಷ್ಠ ಜ್ಞಾನ ಸಂಪಾದಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ವಿಶ್ವಸಂಸ್ಥೆ, ಇಡೀ ಜಗತ್ತೇ ‘ವಿಶ್ವಜ್ಞಾನ ದಿನ’ ಎಂದು ಆಚರಿಸುತ್ತಿರುವದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಗಾಂಧಿ ಭವನ, ಮೈಸೂರು ವಿಶ್ವ ವಿದ್ಯಾನಿಲಯ ನಿರ್ದೇಶಕ ಎಂ.ಎಸ್. ಶೇಖರ್ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆಯಲ್ಲಿ ದಸಂಸ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನಡೆದ ‘ದಲಿತ ಅಸ್ಮಿತೆ ಸಾಮಾಜಿಕ ಹೊಣೆಗಾರಿಕೆ’ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾರ್ಥ ಬಿಟ್ಟು, ಅವಮಾನ ಸಹಿಸಿದ ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲ; ಸರ್ವರಿಗೆ ಮತ್ತು ಪರಿಸರಕ್ಕೆ ಸಂವಿಧಾನ ಕೊಡುಗೆ ನೀಡಿದ ಶ್ರೇಷ್ಠ ವ್ಯಕ್ತಿ ಎಂದು ಶೇಖರ್ ಶ್ಲಾಘಿಸಿದರು.
ಮಾನಸ ಗಂಗೋತ್ರಿಯ ಡಾ. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಸಂಯೋಜನಾ ಧಿಕಾರಿ ಡಾ. ಎಸ್. ನರೇಂದ್ರಕುಮಾರ್ ಅವರು ‘ಭಾರತೀಯ ಸಂವಿಧಾನ ಮಹತ್ವ’ ವಿಷಯ ಮಂಡನೆ ಮಾಡಿದರು.
ದಸಂಸ ರಾಜ್ಯ ಸಂಚಾಲಕ ಹೆಬ್ಬಾಲೆ ಲಿಂಗರಾಜ್ ಅವರು ‘ದಲಿತ ಸಂಘರ್ಷ ಸಮಿತಿ ಹೋರಾಟದ ಚರಿತ್ರೆ’ ವಿಷಯದ ಬಗ್ಗೆ ಹಾಗೂ ಪ್ರಗತಿ ಪರ ಚಿಂತಕ ಸುಬ್ಬು ಹೊಲೆಯಾರ್ ಅವರು ‘ದಲಿತರ ಅಸ್ಮಿತೆ ಮತ್ತು ಹೊಣೆಗಾರಿಕೆ’ ವಿಷಯ ಮಂಡನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಮಾನಸ ಗಂಗೋತ್ರಿಯ ಸಂಶೋಧನಾ ವಿದ್ಯಾರ್ಥಿ ವಿ.ವಿ. ಸುನಿಲ್ ಕುಮಾರ್ ಹಾಗೂ ಕವಿ ಮಾಯಣ್ಣ ಮಾತನಾಡಿದರು. ಜಗದೀಶ್ ಮತ್ತು ಪುನೀತ್ ಯುವ ಕಲಾ ತಂಡದವರ ಕ್ರಾಂತಿ ಗೀತೆಗಳು ಮೂಡಿಬಂದವು.
ದಲಿತ ಮುಖಂಡ ಡಿ.ಸಿ. ನಿರ್ವಾಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖ ರಾದ ಕೆ.ಬಿ. ಗುರುಮೂರ್ತಿ, ಡಾ. ರಾಚಪ್ಪಾಜಿ, ಪ್ರೊ. ಸುರೇಶ್, ಶಿವಕುಮಾರ್, ಗೋವಿಂದ್ ರಾಜ್, ಹೂವಯ್ಯ, ಔರಂಗ್‍ಜೇಬ್, ಮಹಮ್ಮದ್ ಹನೀಫ್, ಶಿಕ್ಷಕ ಡಿ.ಪಿ. ಸತೀಶ್, ಧರ್ಮಸ್ಥಳ ಸಂಘದ ಜಿಲ್ಲಾ ಪ್ರಬಂಧಕ ಡಿ.ಎನ್. ವಸಂತ್, ಶಿಕ್ಷಣ ಇಲಾಖೆಯ ಡಿ.ಎಚ್. ಶಾಂತ ಕುಮಾರ್ ಉಪಸ್ಥಿತರಿದ್ದರು.