ಮಡಿಕೇರಿ, ಫೆ. 1: ಸರ್ವದೈವತ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಹಾಗೂ ಕಾಲೇಜು ವಿಭಾಗದ ಮಕ್ಕಳಿಗೆ ವಿಜ್ಞಾನ, ಗಣಿತ ಹಾಗೂ ಆಟ್ರ್ಸ್ ಮತ್ತು ಕ್ರಾಫ್ಟ್ ಪ್ರದರ್ಶನ ಮತ್ತು ಪೋಷಕರಿಗೆ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಗೋಣಿಕೊಪ್ಪಲು ಠಾಣಾಧಿಕಾರಿಗಳಾದ ಶ್ರೀಧರ್ ಬಿ.ಎಸ್. ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಕೆಲಸಗಳ ನಡುವೆಯೂ ಸಮಯವನ್ನು ಮಾಡಿಕೊಂಡು ಮಕ್ಕಳನ್ನು ವಿದ್ಯೆಯ ಕಡೆಗೆ ವಾಲುವಂತೆ ಮಾಡಬೇಕು. ಮಕ್ಕಳನ್ನು ಮೊಬೈಲ್‍ನಿಂದ ದೂರವಿಡಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು. ವಸ್ತು ಪ್ರದರ್ಶನ ಹಾಗೂ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗಣರಾಜ್ಯೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಬೇಸೆಂಟ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸುಲೋಚನಾ ನಾರಾಯಣ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಳೆದ 2017-18ರ ಸಾಲಿನಲ್ಲಿ ಎಲ್‍ಕೆಜಿಯಿಂದ ದ್ವಿತೀಯ ಪಿಯುಸಿಯವರೆಗೆ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪುಷ್ಪ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರಾಜ್ಯ ಪ್ರಶಸ್ತಿಯನ್ನು ಯಧುವೀರ್ ಮಹಾರಾಜರಿಂದ ಸ್ವೀಕರಿಸಿದ ಛಾಯಾ ಚಿತ್ರಗ್ರಾಹಕರಾದ ಶಿವಣ್ಣ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇಂದಿನ ಅತಿಥಿಗಳು ಮಾತನಾಡುತ್ತಾ ಮಕ್ಕಳು ಮುಂದೆ ಒಳ್ಳೆಯ ಪ್ರಜೆಗಳಾಗಬೇಕು ಎನ್ನುವದು ಎಲ್ಲಾ ಪೋಷಕರ ಆಶಯವಾಗಿರುತ್ತದೆ. ಆದುದರಿಂದ ಪೋಷಕರು ಬೇರೆ ಮಕ್ಕಳ ಮಾದರಿಯನ್ನು ನೋಡಿ ತಮ್ಮ ಮಕ್ಕಳನ್ನು ಓದು ಓದು ಎಂದು ಪೀಡಿಸಬಾರದು. ಇದನ್ನು ಬಿಟ್ಟು ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಕಂಡು ಅವರ ವಿದ್ಯಾಭ್ಯಾಸಕ್ಕೆ ಪ್ರೇರೇಪಣೆ ಕೊಡಬೇಕು. ಪೋಷಕರು ಮಕ್ಕಳ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳ ಪ್ರತಿಭೆಗಳು ಇನ್ನಷ್ಟು ಹೊರಹೊಮ್ಮಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಮೊಣ್ಣಪ್ಪ, ಪ್ರಾಂಶುಪಾಲೆ ಲಲಿತಾ ಮೊಣ್ಣಪ್ಪ, ಆಡಳಿತಗಾರರಾದ ಆದಿತ್ಯ ಅಯ್ಯಪ್ಪ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್ ಉಪಸ್ಥಿತರಿದ್ದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.