ಮಡಿಕೇರಿ, ಫೆ. 1: ತಾಲೂಕು ಬಿಜೆಪಿ ಸಭೆ ಇಂದು ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕು ಬಿಜೆಪಿ ಸಭೆ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ಮುಂಬರುವ ಏಪ್ರಿಲ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದರಲ್ಲದೆ, ಈ ಕುರಿತು ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ತಿಳಿಸಿದರು.

ಮೋದಿ ಆಡಳಿತವನ್ನು ಸಹಿಸಲಾಗದ ವಿರೋಧ ಪಕ್ಷಗಳು ಅವರನ್ನು ಸೋಲಿಸಲು ಶತ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುವದೇ ಕಾಂಗ್ರೆಸ್‍ನವರ ಧರ್ಮವಾಗಿದೆ ಎಂದು ಹೇಳಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಮಡಿಕೇರಿ ಮತ್ತು ಸೋಮವಾರಪೇಟೆಯಲ್ಲಿ ಮಳೆಯಿಂದಾದ ಅನಾಹುತಗಳ ಬಗ್ಗೆ ಸರಕಾರದ ಕಾಳಜಿ ಏನಿದೆ ಎಂಬದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕೃತಿ ವಿಕೋಪ ಸಂದರ್ಭ ರಾಜ್ಯದ ಎಲ್ಲಾ ಮಂತ್ರಿಗಳು ಆಗಮಿಸಿ ಭರವಸೆಯ ಮಾತುಗಳನ್ನಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ 6 ತಿಂಗಳು ಕಳೆದರು ಕೂಡ ಒಂದು ಮನೆಯೂ ನಿರ್ಮಾಣವಾಗಿಲ್ಲ. ಸಂತ್ರಸ್ತರ ಖಾತೆಗೆ ಪರಿಹಾರ ಹಣವೂ ಜಮೆ ಆಗಿಲ್ಲ. ಸರಕಾರ ಕೊಡಗು ಸಂತ್ರಸ್ತರನ್ನು ವಂಚಿಸುತ್ತಿರುವದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ರಾಜ್ಯ ಸರಕಾರಕ್ಕೆ ವರ್ಗಾವಣೆ ಭಾಗ್ಯ ಬಿಟ್ಟರೆ ಬೇರೇನೂ ತಿಳಿದಿಲ್ಲ. ಇವೆಲ್ಲದರ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದರು.

ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ಭಾರತೀಶ್, ಜಿ.ಪಂ. ಅಧ್ಯಕ್ಷ ಬಿ.ಎ ಹರೀಶ್, ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಕಳಗಿ, ರವಿ ಕಾಳಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ ಮತ್ತಿತರರು ಇದ್ದರು.