ವೀರಾಜಪೇಟೆ. ಫೆ.1: ವೀರಾಜಪೇಟೆ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಕೊಡಗು ಪ್ಯಾಕೆಜ್ ಅನುದಾನ ಹಾಗೂ ಪ್ರಕೃತಿ ವಿಕೋಪದ ಅನುದಾನ ಸೇರಿ ರೂ. 2 ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ತಾಲೂಕಿನ ಎರಡನೇ ರುದ್ರುಗುಪ್ಪೆಯಿಂದ ವಿ. ಬಾಡಗ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಡಾಂಬರೀಕರಣಕ್ಕೆ ಮಳೆ ಪರಿಹಾರದ ಅನುದಾನದಲ್ಲಿ ರೂ. 12 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರೂ. 10 ಲಕ್ಷದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕ ಬೋಪಯ್ಯ ಈ ಎಲ್ಲಾ ಕಾಮಗಾರಿಗಳನ್ನು ಮಾರ್ಚ್ ತಿಂಗಳ 31 ರೊಳಗೆ ಮುಗಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿಗಳು ನಡೆಯುವ ಸಂದರ್ಭ ಕಳಪೆಯಾಗದಂತೆ ಗ್ರಾಮಸ್ಥರು ನೋಡಿಕೊಳ್ಳುವದು ಉತ್ತಮ ಎಂದರು.

ಇದಕ್ಕೂ ಮೊದಲು ಕಂಡಂಗಾಲದ ಮಂದಮಾಡ ಪಳ್ಳಿರಸ್ತೆಗೆ ರೂ,10 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆಗೆ ಮತ್ತು ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅನೇಕ ರಸ್ತೆಗಳು ದುಸ್ಥಿತಿಯಲ್ಲಿದ್ದು ಈಗಾಗಲೇ ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣಕ್ಕೆ ಪ್ರಕೃತಿ ವಿಕೋಪದ ಯೋಜನೆಯಲ್ಲಿ ರೂ. 15 ಲಕ್ಷ ಹಾಗೂ ಪುಲಿಯೇರಿ ಬೊಮ್ಮಂಡ ಐನ್‍ಮನೆ ರಸ್ತೆಗೆ ರೂ. 3 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಮಾತನಾಡಿದರು.

ವಿ. ಬಾಡಗದಲ್ಲಿ ನಡೆದ ಭೂಮಿ ಪೂಜೆ ಸಂದರ್ಭ ಬಿಜೆಪಿಯ ಅಮ್ಮಣಿಚಂಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಲಾಲ ಭೀüಮಯ್ಯ, ಕಿಟ್ಟು ಕುಟ್ಟಪ್ಪ, ಬಲ್ಲಡಿಚಂಡ ಸೀತಮ್ಮ, ಮಾಚಯ್ಯ, ಮೂಕಚಂಡ ಅರುಣ್ ಅಪ್ಪಣ್ಣ, ಗಣಪತಿ, ಕೆ.ಮೋಹನ್ ಮೊಣ್ಣಪ್ಪ, ಮಲ್ಲಂಡ ಮದುದೇವಯ್ಯ, ವಿಷ್ಣು, ಹಾಗೂ ಅಮ್ಮತ್ತಿ ಪುಲಿಯೇರಿ ಯಲ್ಲಿ ನಡೆದ ಭೂಮಿ ಪೂಜೆಯಲ್ಲಿ ಅಲ್ಲಿನ ಗ್ರಾ,ಪಂ, ಅಧ್ಯಕ್ಷೆ ಪಿ.ಎಸ್.ಶಾಂತ, ಉಪಾಧ್ಯಕ್ಷ ದಿತಿನ್ ನಾಚಪ್ಪ, ಸದಸ್ಯರಾದ ಚಂದ್ರಕಲಾ ಪ್ರಶಾಂತ್, ತಾಯಮ್ಮ, ಅಭಿವೃದ್ಧಿ ಅಧಿಕಾರಿ ಮೇದಪ್ಪ, ಮುಂತಾದವರು ಉಪಸ್ಥಿತರಿದ್ದರು.