ಮಡಿಕೇರಿ, ಫೆ. 1 : ಪರಿಸರದ ಮಹತ್ವ ಅರಿಯದ ಕೆಲವು ವ್ಯಕ್ತಿಗಳು ತಾ.11 ರಂದು ಗೋಣಿಕೊಪ್ಪದಲ್ಲಿ ಪ್ರಚೋದನಾಕಾರಿಯಾಗಿ ಪ್ರತಿಭಟನಾ ರ್ಯಾಲಿ ನಡೆಸಲು ನಿರ್ಧರಿಸಿದ್ದು, ಇದು ಸರ್ವೋಚ್ಚ ನ್ಯಾಯಾಲಯದ ಪರಿಸರ ಪರ ಆದೇಶಕ್ಕೆ ವಿರುದ್ಧ ವಾಗಿರುವದರಿಂದ ಪೊಲೀಸ್ ಇಲಾಖೆ ತಕ್ಷಣ ಸಮಾವೇಶದ ಆಯೋಜಕರನ್ನು ಬಂಧಿಸಬೇಕೆಂದು ಕಾವೇರಿಸೇನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆಯ ಕಾನೂನು ಸಲಹೆಗಾರ, ಹಿರಿಯ ವಕೀಲ ಬಿ.ಎ.ಮಾಚಯ್ಯ, ಪ್ರತಿಭಟನಾ ರ್ಯಾಲಿಗೆ ಕರೆ ಕೊಟ್ಟವರನ್ನು ಮುಂಜಾಗೃತ ಕ್ರಮವಾಗಿ ಬಂಧಿಸಿ ಮೊಕದ್ದಮೆ ದಾಖಲು ಮಾಡದಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವದಾಗಿ ಎಚ್ಚರಿಕೆ ನೀಡಿದರು.
ಪರಿಸರÀ ಸಂರಕ್ಷಣೆಗೆ ವಿರುದ್ಧವಾಗಿ ತಾ.11 ರಂದು ಪ್ರತಿಭಟನೆಗೆ ಕರೆ ನೀಡುವ ಮೂಲಕ ಬಂದ್‍ಗೆ ಪ್ರಚೋದನೆ ನೀಡಲಾಗಿದ್ದು, ಇದು ಕಾನೂನಿಗೆ ವಿರುದ್ಧವಾದ ಕ್ರಮವಾಗಿದೆ. ಕೇವಲ ಜನ ಸಾಮಾನ್ಯರ ಮೇಲೆ ಕಾನೂನು, ನೀತಿ, ನಿಯಮಗಳನ್ನು ಪ್ರಯೋಗಿಸುವ ಅಧಿಕಾರಿಗಳು ಪರಿಸರಕ್ಕೆ ವಿರುದ್ಧವಾಗಿ ಕಾನೂನು ಉಲ್ಲಂಘಿಸುತ್ತಿರುವವರ ಮೇಲೆ ಯಾಕೆ ಈ ಕ್ರಮ ಕೈಗೊಳ್ಳುತ್ತಿಲ್ಲವೆಂದು ಮಾಚಯ್ಯ ಪ್ರಶ್ನಿಸಿದರು.
ಮರಗಳನ್ನು ಕಡಿದು ಚತುಷ್ಪಥ ರಸ್ತೆ ಹಾಗೂ ರೈಲು ಮಾರ್ಗ ನಿರ್ಮಿಸಬೇಕೆಂದು ಒತ್ತಡ ಹೇರುವದು ಪರಿಸರಪರ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ, ಅಲ್ಲದೆ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಕೊಡಗಿನ ಬೆಟ್ಟಗುಡ್ಡಗಳಲ್ಲಿ ತೇವಾಂಶವಿದೆ, ಇಲ್ಲಿ ಮರಗಳನ್ನು ಕಡಿಯಲು ಯಾವದೇ ಕಾರಣಕ್ಕೂ ಅವಕಾಶ ನೀಡಬಾರದು. ಮತಬೇಟೆಗಾಗಿ ರಾಜಕಾರಣಿಗಳು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮಾಚಯ್ಯ ಟೀಕಿಸಿದರು.
ಕಾವೇರಿಸೇನೆ ಸಂಚಾಲಕ ಕೆ.ಎ. ರವಿಚಂಗಪ್ಪ ಮಾತನಾಡಿ, ಕಳೆದ ಮಳೆಗಾಲದಲ್ಲಿ ಸಂಭವಿಸಿದ ಅನಾಹುತಕ್ಕೆ ಮಾನವ ನಿರ್ಮಿತ ತಪ್ಪುಗಳೇ ಕಾರಣವೆಂದು ವರದಿ ಬಿಡುಗಡೆಯಾಗಿದ್ದರೂ ಕೆಲವರು ಪರಿಸರಕ್ಕೆ ವಿರುದ್ಧವಾಗಿಯೆ ನಡೆದುಕೊಳ್ಳುತ್ತಿದ್ದಾರೆ. ಮರಳು, ಕಲ್ಲುಗಣಿಗಾರಿಕೆ, ಮರವ್ಯಾಪಾರಿಗಳು ಸೇರಿಕೊಂಡು ಒಂದು ಪಕ್ಷವನ್ನು ಬೆಳೆಸುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಗಣಿಗಾರಿಕೆ ಮತ್ತು ಮರಕಡಿತಲೆ ನಡೆಯುತ್ತಿದೆ, ಇದನ್ನು ನಿಯಂತ್ರಿಸಲು ನಾವು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದರೂ, ಬೆಂಗಳೂರಿನಲ್ಲಿ ಕುಳಿತಿರುವ ಕೊಡಗಿನ ವಕೀಲರೊಬ್ಬರು ಮರಗಳ ನಾಶದ ಪರವಾಗಿ ಕಾರ್ಯಾಚರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಾಬೀತು ಪಡಿಸಲಿ
ತಮ್ಮ ವಿರುದ್ಧ ಸಂಘಟನೆಯೊಂದು ಮಾಡಿರುವ ಭ್ರಷ್ಟಚಾರದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ರವಿಚಂಗಪ್ಪ ಆರೋಪವನ್ನು ಹಣ ನೀಡಿದವರು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಕಾವೇರಿಸೇನೆಯಿಂದ ಪರಿಸರ ಸಂರಕ್ಷಣೆಗಾಗಿ ನಿರಂತರವಾಗಿ ಸೇವೆ ನಡೆಯುತ್ತಿದೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಈ ಹಿಂದೆ ಕಾವೇರಿಸೇನೆ ಹೋರಾಟ ನಡೆಸಿ ಸಾವಿರಾರು ಮಂದಿಗೆ ನ್ಯಾಯ ಒದಗಿಸಿಕೊಟ್ಟಿದೆ. ಆದರೆ ಇಂದು ಸೇನೆಯಿಂದ ಲಾಭ ಪಡೆದವರು ಸೇನೆಯ ಹೋರಾಟಗಳಿಗೆ ಕೈ ಜೋಡಿಸುತ್ತಿಲ್ಲವೆಂದು ರವಿಚಂಗಪ್ಪ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚುಮ್ಮಿ ಪೂವಯ್ಯ, ದಿವ್ಯ ನಂಜಪ್ಪ, ಬಿದ್ದಂಡ ತೇಜುಕುಮಾರ್ ಹಾಗೂ ಹೊಸಬೀಡು ಶಶಿ ಉಪಸ್ಥಿತರಿದ್ದರು.