ಸಿದ್ದಾಪುರ, ಫೆ. 1: ಶಿಷ್ಟರ ಸಹವಾಸ ಮಾಡುವ ಮೂಲಕ ಎಲ್ಲಾರೂ ಶಿಷ್ಟರ ಸಹವಾಸ ಮಾಡಿ ಒಳ್ಳೆಯ ತನದಿಂದ ಜೀವನ ಮಾಡಬೇಕು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿಗಳು ನುಡಿದರು.

ಸಿದ್ದಾಪುರ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ಆರ್ಶಿವಚನ ನೀಡಿದ ಅವರು, ವಿದ್ಯಾರ್ಥಿಗಳು ಒಳ್ಳೆಯ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಬಿ.ಜಿ.ಎಸ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಉತ್ತುಂಗಕ್ಕೇರಲು ಶ್ರಮಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ ವೀರಾಜಪೇಟೆ ಕ್ಷೇತ್ರ ಶಾಸಕರಾದ ಕೆ.ಜಿ. ಬೋಪಯ್ಯ ಮಾತನಾಡಿ ಯಾರು ಕೂಡ ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ 6 ರಿಂದ 16 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಎಂಬ ಕಾನೂನನ್ನು ತಂದಿದ್ದು ಈ ಕೀರ್ತಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದರು.

ಸಿದ್ದಾಪುರ ಪ್ರೌಢಶಾಲೆಯನ್ನು ಬಿ.ಜಿ.ಎಸ್. ವಿದ್ಯಾಸಂಸ್ಥೆಯು ಕಳೆದ ವರ್ಷವಷ್ಟೆ ದತ್ತು ಪಡೆದು ಅಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದೆ. 60 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ 400 ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಪಠ್ಯದೊಂದಿಗೆ ಧಾರ್ಮಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಒತ್ತು ನೀಡುತಿದ್ದು, ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾಗಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶ್ವ ತಾಯಿಂದಿರ ದಿನದಂದು ಶಾಲೆಯಲ್ಲಿ ತಾಯಿಂದಿರಿಗಾಗಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ನಡೆದ ವಿವಿಧ ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದ ಜನರ ಮನರಂಜಿಸಿದವು.

ಈ ಸಂದರ್ಭ ವೀರಾಜಪೇಟೆ ತಹಶೀಲ್ದಾರ್ ಗೋವಿಂದ್ ರಾಜ್, ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷರು ಇದ್ದರು.

ವಿಶೇಷ ಸನ್ಮಾನ : ಬಿ.ಜಿ.ಎಸ್. ವಿದ್ಯಾಸಂಸ್ಥೆಗೆ ತೆರಳುವ ರಸ್ತೆ ಇಕ್ಕಟಾಗಿದ್ದು ಒಂದು ಸಣ್ಣ ವಾಹನ ಸಂಚರಿಸಲು ಕಷ್ಟವಾದ ರಸ್ತೆ ಇದ್ದ ಹಿನ್ನೆಲೆಯಲ್ಲಿ ಅಗಲ ರಸ್ತೆ ನಿರ್ಮಾಣಕ್ಕೆ ತಮ್ಮ 1.08 ಎಕ್ರೆ ತೋಟದ ಜಾಗವನ್ನು ದಾನ ನೀಡಿದ ಪಟ್ಟಡ ಕುಶಾಲಪ್ಪ (ಆಶೋಕ್) ಅವರನ್ನು ರಸ್ತೆ ನಿರ್ಮಿಸಲು ಸಹಕರಿಸಿದ ಸಿದ್ದಾಪುರ ಗ್ರಾ.ಪ ಅಧ್ಯಕ್ಷ ಮಣಿ ಅವರುಗಳನ್ನು ಈ ಸಂದÀರ್ಭ ಸನ್ಮಾನಿಸÀಲಾಯಿತು.