ಸಿದ್ದಾಪುರ, ಫೆ. 4: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಸಿ.ಪಿ.ಐ.ಎಂ. ವತಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಗ್ರಾ.ಪಂ. ಮನವಿ ನೀಡಿದ್ದು, ಸ್ವಂದಿಸದಿದ್ದಲ್ಲಿ ಗ್ರಾ.ಪಂ. ಮುಂದೆ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವದೆಂದು ಸಿ.ಪಿ.ಐ.ಎಂ. ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರ ಗ್ರಾ.ಪಂ. ಅತಿ ಹೆಚ್ಚಿನ ಸದಸ್ಯರುಗಳನ್ನು ಹೊಂದಿದ್ದರೂ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುತಿದ್ದಾರೆ. ಚರಂಡಿ, ರಸ್ತೆ, ದಾರಿ ದೀಪಗಳು ಸೇರಿದಂತೆ ಯಾವದೇ ಇತರ ವ್ಯವಸ್ಥೆಗಳಿಲ್ಲ. ಕೂಡಲೇ ಇವುಗಳನ್ನು ಸರಿಪಡಿಸಬೇಕು, ಹೈಸ್ಕೂಲ್ ಪೈಸಾರಿಯಲ್ಲಿ ಹಲವು ಕುಟುಂಬಗಳು ವಾಸಿಸುತಿದ್ದು ಅವರುಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ, ಗೂಡುಗದ್ದೆಯ ನದಿ ತಟದ ಪ್ರದೇಶಗಳಲ್ಲಿನ ಹಲವು ಮನೆಗಳ ಹಿಂಭಾಗ ತಡಗೋಡೆಗಳಿಲ್ಲದೆ ಮನೆ ಕುಸಿಯುವ ಅಪಾಯವಿದೆ. ಕಸ ವಿಲೇವಾರಿ ಸಮರ್ಪಕವಾಗಿ ಮಾಡದ ಕಾರಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ ಕೊಳೆಯುತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಸಂತೆ ಮಾರುಕಟ್ಟೆಯಲ್ಲಿ ಸುಮಾರು ರೂ. 12 ಲಕ್ಷ ವೆಚ್ಚದಲ್ಲಿ ಕುರಿ, ಕೋಳಿ, ಮೀನು, ಹಂದಿ ವ್ಯಾಪಾರಕ್ಕೆ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ ವ್ಯಾಪಾರ ಮಾಡಲು ಅವಕಾಶ ನೀಡದೇ ಅವುಗಳಿಗೆ ಬೀಗ ಹಾಕಿ ಇಡಲಾಗಿದೆ ಅವುಗಳನ್ನು ಉದ್ದೇಶಿತ ಕೆಲಸಕ್ಕೆ ಬಳಸಬೇಕು. ಅಲ್ಲದೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನೆ, ಕಾಡು ಕೋಣಗಳ ಉಪಟಳ ಅಧಿಕವಾಗಿದ್ದು, ಅವುಗಳ ನಿಯಂತ್ರಣವಾಗಬೇಕು. ಈ ಸಂಬಂಧ ಮುಂದೆ ನಿರಂತರ ಪ್ರತಿಭಟನೆಗಳನ್ನು ನಡೆಸಲಾಗುವದು ಎಂದು ಎಚ್ಚರಿಕೆಯನ್ನು ನೀಡಿದರು.
ಸಮಿತಿ ಸದಸ್ಯ ರಮೇಶ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯ ಕಾಫಿ ತೋಟಗಳಿಂದ ಕಾಫಿ ಪಲ್ಪಿಂಗ್ ನೀರು ನೇರವಾಗಿ ನದಿಗೆ ಸೇರುತ್ತಿದ್ದು, ನದಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಕುಡಿಯಲು ಹಾಗೂ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಬಳಸುವ ನದಿ ನೀರು ಮಲೀನವಾಗುತಿದ್ದು ಪಲ್ಪಿಂಗ್ ನೀರು ನದಿ ಸೇರುವದಕ್ಕೆ ನಿಯಂತ್ರಣ ಹಾಕಬೇಕೆಂದರು.
ಗೋಷ್ಠಿಯಲ್ಲಿ ಗ್ರಾಮ ಸಮಿತಿ ಸದಸ್ಯ ಮುಸ್ತಫ ಇದ್ದರು.