ವೀರಾಜಪೇಟೆ, ಫೆ. 4: ಕರ್ನಾಟಕವನ್ನು ನೆರೆಯ ಕೇರಳ ರಾಜ್ಯದೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಅಂತರ ರಾಜ್ಯ ಹೆದ್ದಾರಿಯ ಕೂಟುಪೊಳೆ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೇರಳ ಸರಕಾರದಿಂದ ರಾಜ್ಯ ಅರಣ್ಯ ಇಲಾಖೆಗೆ ನವೀಕರಣಗೊಂಡ ಇತ್ತೀಚಿನ ಗಡಿ ರೇಖಾ ನಿರ್ಣಯ ಭೂಪಟವನ್ನು ಹಸ್ತಾಂತರಿಸ ಲಾಯಿತು. ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಸೇತುವೆ ನಿರ್ಮಾಣ ಶೀಘ್ರದಲ್ಲಿಯೇ ಪುನರಾರಂಭ ಗೊಳ್ಳಲಿದೆ.ಶತಮಾನ ಕಂಡ ಸೇತುವೆ ಹಲವು ವರ್ಷಗಳಿಂದ ದುರ್ಬಲಗೊಂಡಿದ್ದು, ಶಿಥಿಲಾವಸ್ಥೆಯಲ್ಲಿರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಾಣ ಕಾರ್ಯ ಎರಡೂವರೆ ವರ್ಷಗಳ ಹಿಂದೆಯೇ ಕೇರಳ ಸರಕಾರ ಕೈಗೆತ್ತಿಗೊಂಡಿತ್ತು. ಆದರೆ, ಸೇತುವೆ ನಿರ್ಮಾಣ ಕಾಮಗಾರಿಗೆ ಆಯ್ದುಕೊಂಡ ಪ್ರದೇಶ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಒಳಪಟ್ಟಿದೆಯೆಂದು ಈ ಬಗ್ಗೆ ಇಲಾಖೆಯ ಪೂರ್ವಾನುಮತಿ ಪಡೆಯಲಿಲ್ಲವೆಂದು ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಆಕ್ಷೇಪವೆತ್ತಿ ತಕರಾರು ಸಲ್ಲಿಸಲಾಗಿತ್ತು. ಆದರೂ, ಕೇರಳಕ್ಕೆ ಸೇರಿದ ಪ್ರದೇಶದಲ್ಲಿ ಕಾಮಗಾರಿ ನಿಧಾನವಾಗಿ ಸಾಗಿತ್ತು. ಸೇತುವೆ ಕಾಮಗಾರಿ ಪೂರ್ಣ ಗೊಳಿಸಲು ಸಾರ್ವಜನಿಕರಿಂದ ಮತ್ತು ಸಂಘ- ಸಂಸ್ಥೆಗಳಿಂದ ಒತ್ತಡಗಳು ಬಂದ ಪರಿಣಾಮ (ಮೊದಲ ಪುಟದಿಂದ) ಎರಡೂ ರಾಜ್ಯಗಳ ಅಧಿಕಾರಿಗಳು ಸಂಯುಕ್ತವಾಗಿ ಭೂಮಾಪನ ಸರ್ವೆ ನಡೆಸಿ ಗಡಿ ನಿರ್ಣಯಕ್ಕೆ ಮುಂದಾದವು. ಇದೀಗ ಹೊಸದಾಗಿ ಗಡಿ ನಿರ್ಣಯಗೊಳಿಸಿ ಕೇರಳ ರಾಜ್ಯದ ಕಾಮಗಾರಿ ಇಲಾಖೆಯ ಅಧಿಕೃತ ಗುತ್ತಿಗೆದಾರರಾದ ಕೆ.ಎಸ್.ಟಿ.ಪಿ.ಯ ಅಧಿಕಾರಿಗಳು ಇರಿಟ್ಟಿ ಕ್ಷೇತ್ರದ ಶಾಸಕ ಸನ್ನಿ ಜೋಸೆಫ್ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೂತನ ಗಡಿ ನಿರ್ಣಯ ಭೂಪಟವನ್ನು ನೀಡಿದ್ದಾರೆ. ಸರಕಾರದೊಂದಿಗೆ ವ್ಯವಹರಿಸಿ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವದಾಗಿ ಅರಣ್ಯ ಸಂರಕ್ಷಣಾಧಿಕಾರಿ ಜಯದೇವ್ ಯಾದವ್ ಆಶ್ವಾಸನೆ ನೀಡಿದ್ದಾರೆ.
ಸೇತುವೆ ಪುನರ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಈ ಮುಂಚೆ ನೀಡಲಾಗಿದ್ದ ಭೂಪಟದಲ್ಲಿನ ಲೋಪದೋಷಗಳನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲ್ತಿ ತೋರಿಸಿದ್ದರು. ಕೆ.ಎಸ್.ಟಿ.ಪಿ.ಸಹಾಯಕ ಅಭಿಯಂತರ ಕೆ.ವಿ.ಸತೀಶನ್, ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿರುವ ಇ.ಕೆ.ಕೆ.ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಡಿ.ಶ್ರೀರಾಗ್ ಮತ್ತು ಶಾಸಕರ ಆಪ್ತಕಾರ್ಯದರ್ಶಿ ಮುಹಮ್ಮದ್ ಜಸೀರ್ ಒಳಗೊಂಡ ತಂಡವು ಕರ್ನಾಟಕ ಅರಣ್ಯ ಇಲಾಖಾಧಿಕಾರಿಗಳನ್ನು ಭೇಟಿಯಾಗಿದ್ದರು.