ಮಡಿಕೇರಿ, ಫೆ. 4: ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಕುರಿತು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಆಯೋಜಿಸಿದ್ದ 54ನೇ ಎಡಿ ಶ್ರಾಫ್ ಜ್ಞಾಪಕಾರ್ಥ ಭಾಷಣ ಸ್ಪರ್ಧೆದಲ್ಲಿ ಕೊಡಗಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶನಿವಾರಸಂತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಬ್ದುಲ್ ರಝಾಕ್ ಪ್ರಥಮ ಸ್ಥಾನಗಳಿಸಿದ್ದಾರೆ. ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಎಂ. ನದೀರ ದ್ವಿತೀಯ ಸ್ಥಾನಗಳಿಸಿದ್ದರೆ, ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ಜಿ.ಎನ್. ಗಾನವಿ ತೃತೀಯ ಸ್ಥಾನ ಗಳಿಸಿದ್ದಾರೆ.

ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಪ್ರಗತಿ, ಮಾಲಿನ್ಯ ಮತ್ತು ಜೀವನ ಗುಣಮಟ್ಟದ ಬೆಳವಣಿಗೆ, ಆರೋಗ್ಯ ಸೇವಾ ಯೋಜನೆಯ ಅನುಷ್ಠಾನದಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳು, ಮಾಲಿನ್ಯವನ್ನು ಎದುರಿಸುವದು ಮತ್ತು ಜೀವನದ ಗುಣಮಟ್ಟ ಸುಧಾರಣೆ, ನಗದುರಹಿತ ಆರ್ಥಿಕತೆ (ಆನ್‍ಲೈನ್ ಆರ್ಥಿಕ ವಹಿವಾಟು) ಕುರಿತು ಸವಾಲುಗಳು, ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ಆಧುನಿಕ ತಂತ್ರಜ್ಞಾನ, ಮುಂತಾದ ವಿಷಯಗಳ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇಸ್ವಾಮಿ, ಅರ್ಥಶಾಸ್ತ್ರ ಪದವಿ ವಿಭಾಗದ ಮುಖ್ಯಸ್ಥೆ ಡಾ. ರೇಣುಶ್ರೀ ಉಪಸ್ಥಿತರಿದ್ದರು.

ಪತ್ರಿಕಾ ವರದಿಗಾರ ವಿಘ್ನೇಶ್ ಭೂತನಕಾಡು, ಸೇಂಟ್ ಜೋಸೆಫ್ ಕಾಲೇಜು ಕನ್ನಡ ಉಪನ್ಯಾಸಕಿ ಜಯಲಕ್ಷ್ಮಿ, ಯೋಗಿಕ್ ಸೈನ್ಸ್ ಉಪನ್ಯಾಸಕಿ ಸುಪರ್ಣ ತೀರ್ಪುಗಾರರಾಗಿದ್ದರು.