ಗೋಣಿಕೊಪ್ಪಲು, ಫೆ. 4: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ-ವಿ. ಬಾಡಗ ರಸ್ತೆಗೆ ಮಳೆಗಾಲದಲ್ಲಿ ತೀವ್ರ ಹಾನಿಯಾದ ಹಿನ್ನೆಲೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಸುಮಾರು ರೂ. 15 ಲಕ್ಷ ವೆಚ್ಚದ ಮಳೆಹಾನಿ ಅನುದಾನದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ವಿಶೇಷ ಪ್ಯಾಕೇಜ್‍ನಲ್ಲಿ ಕೊಂಗಾಣ ಮೂಲೆಮನೆ ರಸ್ತೆಗೆ ರೂ. 5 ಲಕ್ಷ ಹಾಗೂ ಕೊಂಗಾಣ - ಆಶ್ರಮ ರಸ್ತೆ ಸಮೀಪ ತಡೆಗೋಡೆ ನಿರ್ಮಾಣಕ್ಕೆ ರೂ. 3 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದ ಕೆ.ಜಿ. ಬೋಪಯ್ಯ, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಮನವಿ ಮಾಡಿದರು. ಕುಟ್ಟಂದಿ-ವಿ. ಬಾಡಗ ರಸ್ತೆ ತೀವ್ರ ಹದಗೆಟ್ಟಿದ್ದು, ಈಗಾಗಲೇ ರೂ. 20 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಉದ್ದೇಶಿತ ರಸ್ತೆಯನ್ನು ಮುಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಅಳವಡಿಸಿದ್ದು, ಆದಷ್ಟು ಶೀಘ್ರ ಅನುದಾನ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು. ಇದೇ ಸಂದರ್ಭ ರಸ್ತೆ ಅಗಲೀಕರಣಕ್ಕೆ ಇಬ್ಬದಿಯ ಕಾಫಿ ತೋಟ ಮಾಲೀಕರು ಸಹಕಾರ ನೀಡುವಂತೆ ಮನವಿ ಮಾಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಠಿಯಿಂದಾಗಿ ಹಲವು ಗ್ರಾಮೀಣ ರಸ್ತೆಗಳು ದುಸ್ಥಿತಿಯಲ್ಲಿದ್ದು ಹೆಚ್ಚಿನ ಅನುದಾನ ಕಲ್ಪಿಸಲು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಟ್ಟಂಗಾಲ ಜಿಲ್ಲಾ ಪಂಚಾಯಿತಿ ಸದಸ್ಯೆ ಭವ್ಯ, ತಾ.ಪಂ. ಸದಸ್ಯ ರಾಜು, ಬಿ.ಜೆ.ಪಿ. ಪ್ರಮುಖರುಗಳಾದ ವಿಜು ಕುಶಾಲಪ್ಪ, ರಂಜು ಪೂಣಚ್ಚ, ಕುಂಬೇಯಂಡ ಗಣೇಶ್, ಕಿಟ್ಟು ಸುಬ್ಬಯ್ಯ, ಮಲ್ಲಂಡ ಮಧುದೇವಯ್ಯ ಮುಂತಾದವರು ಉಪಸ್ಥಿತರಿದ್ದರು.