ಮಮತಾ ಬೆಂಬಲಕ್ಕೆ ನಿಂತ ದೇವೇಗೌಡ

ಬೆಂಗಳೂರು, ಫೆ. 4: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು, ಬಂಗಾಳದ ಸ್ಥಿತಿಯನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪೆÇಲೀಸ್ ಅಧಿಕಾರಿಗಳನ್ನು ಸಿಬಿಐ ಬಂಧಿಸಲು ಮುಂದಾಗುವ ಮೂಲಕ ಪ್ರಾದೇಶಿಕ ಪಕ್ಷಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಎಚ್ಚರಿಕೆ ನೀಡಿದೆ. ಮೋದಿ ವಿರುದ್ಧದ ಅಲೆಗಳನ್ನು ಒಟ್ಟುಗೂಡಿಸಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಿದೆ. ಪಶ್ಚಿಮ ಬಂಗಾಳದಲ್ಲಿನ ಬೆಳವಣಿಗೆಗಳು ಇಂದು ದೇವೇಗೌಡರ ಪದ್ಮನಾಭ ನಗರ ನಿವಾಸದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಸಿಬಿಐ ಅಧಿಕಾರಿಗಳಿಂದ ಪೆÇಲೀಸರ ಬಂಧನ ಒಕ್ಕೂಟ ವ್ಯವಸ್ಥೆಗೆ ಮಾಡಿದ ಅವಮಾನ. ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ತನಿಖೆಗೆ ಅವಕಾಶ ಕೊಟ್ಟಿಲ್ಲವೆಂದು ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ದಾಖಲೆ ಕೊಡುವಂತೆ ಹೇಳಿದೆ. ಕೇಂದ್ರ ಬಿಜೆಪಿ, ಸಿಬಿಐ ಅನ್ನು ಕಳೆದ 4 ವರ್ಷದಿಂದ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದೆ. ಮೋದಿ ವಿರುದ್ಧ ಒಂದಾಗುತ್ತಿರುವ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸ್ಥಳೀಯವಾಗಿ ದೊಡ್ಡ ನಾಯಕರಿದ್ದಾರೆ. ಆದರೆ ಕಾಂಗ್ರೆಸ್ ಸಹಕಾರವಿಲ್ಲದೇ ಕೇಂದ್ರದಲ್ಲಿ ಪ್ರಾದೇಶಿಕ ಸರ್ಕಾರಗಳು ರಚನೆ ಮಾಡುವದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.

ಕೇಂದ್ರದ ದೌರ್ಜನ್ಯದ ವಿರುದ್ಧ ಸತ್ಯಾಗ್ರಹ

ನವದೆಹಲಿ, ಫೆ. 4: ನರೇಂದ್ರ ಮೋದಿ ಸರ್ಕಾರದ ದೌರ್ಜನ್ಯಗಳ ವಿರುದ್ಧ ಸತ್ಯಾಗ್ರಹ ನಡೆಸುತ್ತಿರುವದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸಿಬಿಐ ವಿರುದ್ಧ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಪ್ರತಿಭಟನೆಗೆ ಇಂದು ಎರಡನೇ ದಿನಕ್ಕೆ ಕಾಲಿಟಿದ್ದು, ನಮ್ಯ ಸತ್ಯಾಗ್ರಹ ಯಾವದೇ ತನಿಖಾ ಸಂಸ್ಥೆಯ ವಿರುದ್ಧ ಅಲ್ಲ. ಮೋದಿ ಸರ್ಕಾರದ ದೌರ್ಜನ್ಯಗಳ ವಿರುದ್ಧ ನಮ್ಮ ಹೋರಾಟ ಎಂದು ದೀದಿ ಹೇಳಿದ್ದಾರೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತಾ ಶಾ ಅವರು ಪಶ್ಚಿಮ ಬಂಗಾಳ ಆಡಳಿತದ ಮೇಲೆ ಧಾಳಿ ನಡೆಸುತ್ತಿದ್ದು, ಸಮಸ್ಯೆ ಪರಿಹಾರಗೊಳ್ಳುವವರೆಗೆ ತಾನು ಧರಣಿ ಮುಂದುವರೆಸುವದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಸಿಬಿಐ ಹಾಗೂ ಬ್ಯಾನರ್ಜಿ ಸರ್ಕಾರದ ನಡುವಿನ ಜಟಾಪಟಿ ಲೋಕಸಭೆಯಲ್ಲೂ ಪ್ರತಿಧ್ವನಿಸಿದ್ದು, ಟಿಎಂಸಿ ಸದಸ್ಯರು ಬಿಜೆಪಿ ಹಟಾವೋ ಎಂದು ಘೋಷಣೆ ಕೂಗಿದರು. ಕೋಲ್ಕತಾ ಪೆÇಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆ ನಡೆಸಲು ಮುಂದಾದ ಸಿಬಿಐ ಕ್ರಮವನ್ನು ಖಂಡಿಸಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಪ್ರತಿಭಟನೆಗೆ ವಿಪಕ್ಷ ನಾಯಕರು ಬೆಂಬಲ ಸೂಚಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೈತ್ರಿಗೆ ಮತ್ತೆ ಆಪರೇಷನ್ ಕಮಲ ಭೀತಿ

ಬೆಂಗಳೂರು, ಫೆ. 4: ಮತ್ತೆ ಆಪರೇಷನ್ ಕಮಲ ಭೀತಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಕಾಡಿದೆ. ರಾಜ್ಯದಲ್ಲಿ ರೆಸಾರ್ಟ್ ರಾಜಕೀಯದ ಬಳಿಕ ಭೋಜನಕೂಟದ ರಾಜಕೀಯ ಆರಂಭವಾಗಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ತಾ. 6 ರಂದು ಖಾಸಗಿ ಹೊಟೇಲ್‍ನಲ್ಲಿ ಭೋಜನ ಕೂಟ ಆಯೋಜಿಸುವ ಮೂಲಕ ಶಾಸಕರ ವಿಶ್ವಾಸಗಳಿಸುವ ಪ್ರಯತ್ನ ನಡೆಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಸಚಿವರಿಗೆ ತಾ. 5 ರಂದು ತಮ್ಮ ನಿವಾಸ ಕಾವೇರಿಯಲ್ಲಿ ಭೋಜನ ಕೂಟ ಆಯೋಜಿಸಿದ್ದಾರೆ. ಆಪರೇಷನ್ ಕಮಲದ ಆತಂಕ, ಬಜೆಟ್ ಮಂಡನೆ ಸಂದರ್ಭದಲ್ಲಿ ಸರ್ಕಾರ ಪತನಗೊಳಿಸಲು ಬಿಜೆಪಿ ಸಂಚು, ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರು ಗೈರು ಹಾಜರಿ, ಕೆಪಿಸಿಸಿ ಅಧ್ಯಕ್ಷರು ನೀಡಿದ ನೋಟಿಸ್ ಗೂ ಉತ್ತರ ನೀಡದ ಅತೃಪ್ತ ಶಾಸಕರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಬಿಜೆಪಿಗೆ ಪ್ರತಿ ಆಪರೇಷನ್ ಭೀತಿ ನಡುವೆಯೇ ಸಿದ್ದರಾಮಯ್ಯ ಸಚಿವರಿಗೆ ಭೋಜನ ಕೂಟ ಆಯೋಜಿಸಿರುವದು ಮಹತ್ವ ಪಡೆದುಕೊಂಡಿದೆ. ಭೋಜನ ಕೂಟದ ಮೂಲಕ ಮೈತ್ರಿ ಸರ್ಕಾರದ ರಕ್ಷಣೆ ಮಾಡುವಂತೆ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ, ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಸಭೆಗೂ ಮುನ್ನ ಸಿದ್ದರಾಮಯ್ಯ ಸಚಿವರ ಸಭೆ ಕರೆದಿರುವದು ಕುತೂಹಲ ಮೂಡಿಸಿದೆ.

ಡೋಂಗಿ ಬಜೆಟ್ ಮಂಡಿಸುವದಿಲ್ಲವೆಂದ ಸಿಎಂ

ಬೆಂಗಳೂರು, ಫೆ. 4: ನಾನು ಪ್ರಧಾನಿ ಮೋದಿಯಂತೆ ಡೋಂಗಿ ಬಜೆಟ್ ಮಂಡಿಸುವದಿಲ್ಲ. ಖಂಡಿತವಾಗಿಯೂ ಉತ್ತಮ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿಯವರು ಏನು ಮಾಡುತ್ತಿದ್ದಾರೆ, ಸರ್ಕಾರದ ಯಾವ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂಬದು ತಮಗೆ ಗೊತ್ತಿದೆ. ಬಿಜೆಪಿಯವರು ಮೈತ್ರಿಕೂಟದ ಶಾಸಕರಿಗೆ ಕೊಡುತ್ತಿರುವ ಆಮಿಷಗಳನ್ನು ಕೇಳಿದರೆ ಭಯವಾಗುತ್ತದೆ. ಆಪರೇಷನ್ ಕಮಲಕ್ಕೆ ಬಳಸುವ ಹಣ ಬಿಜೆಪಿಗೆ ಎಲ್ಲಿಂದ ಬಂತು ಎಂಬದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು. ಶನಿವಾರ, ಭಾನುವಾರ ಬಿಜೆಪಿಯವರು ಯಾರನ್ನು ಸಂಪರ್ಕ ಮಾಡಿ, ಏನು ಆಫರ್ ನೀಡಿದರು ಎಂಬದು ತಮಗೆ ಗೊತ್ತಿದೆ ಎಂದರು. ಆಪರೇಷನ್ ಕಮಲಕ್ಕೆ ತಮ್ಮ ಅಭ್ಯಂತರವಿಲ್ಲ. ಆಪರೇಷನ್ ಕಮಲ ಮಾಡಲು ಬಿಜೆಪಿಯವರಿಗೆ ಸಂಪೂರ್ಣ ಸ್ವಾತಂತ್ರವಿದೆ. ಸಂತೋಷವಾಗಿ ಆಪರೇಷನ್ ಕಮಲ ಮಾಡಿಕೊಳ್ಳಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಕುಮಾರಸ್ವಾಮಿ ಅವರಿಗೆ ಸರ್ಕಾರ ಉಳಿಸಿಕೊಂಡರೆ ಸಾಕಾಗಿದೆ ಎಂಬ ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಾವು ಪ್ರಧಾನಿ ನರೇಂದ್ರ ಮೋದಿ ಅವರಂತೆ ಡೋಂಗಿ ಬಜೆಟ್ ಮಂಡಿಸುವದಿಲ್ಲ. ರಾಜ್ಯದ ಜನತೆಗೆ ಏನು ಕೊಡಬೇಕು ಎಂಬ ಬಗ್ಗೆ ಗಮನ ಹರಿಸುತ್ತಿದ್ದು, ಇದಕ್ಕಾಗಿ 15 ದಿನಗಳಿಂದ ಸಿದ್ಧತೆ ನಡೆಸುತ್ತಿದ್ದೇನೆ ಎಂದರು.

ಆಪರೇಷನ್ ಲೋಟಸ್ ರಾಕೆಟ್‍ಗೆ ಸಿದ್ಧತೆ

ಬೆಂಗಳೂರು, ಫೆ. 4: ಆಪರೇಷನ್ ಲೋಟಸ್ ರಾಕೆಟ್ ನಡೆಸಲು ಸಿದ್ಧತೆ ನಡೆದಿದೆ ಎನ್ನುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತುರ್ತು ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಮಂಗಳವಾರ ಎಲ್ಲಾ ಶಾಸಕರು ಬೆಂಗಳೂರಿಗೆ ಬರುವಂತೆ ಬಿಎಸ್‍ವೈ ಬುಲಾವ್ ನೀಡಿದ್ದು, ಮಧ್ಯಾಹ್ನ 3.30ಕ್ಕೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ತಾ. 6 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿರುವ ಬೆನ್ನಲ್ಲೇ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಪ್ತ ರಾಮಲಾಲ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಸಂಜೆ 6 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಮಲಾಲ್ ಜೊತೆ ರಾಜ್ಯ ನಾಯಕರು ಚರ್ಚಿಸಲಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಯಡಿಯೂರಪ್ಪ ಅವರ ಮೈಸೂರು ಪ್ರವಾಸ ದಿಢೀರ್ ರದ್ದಾಗಿದೆ. ನಿಗದಿ ಪ್ರಕಾರ ಬಿಎಸ್‍ವೈ ಸುತ್ತೂರು ಜಾತ್ರೆಗೆ ತೆರಳಬೇಕಿತ್ತು. ಆದರೆ ಆಪರೇಷನ್ ಲೋಟಸ್ ರಾಕೆಟ್ ಅಂತಿಮ ಹಂತ ತಲುಪಿರುವ ಹಿನ್ನೆಲೆ ಮೈಸೂರು ಪ್ರವಾಸ ರದ್ದು ಮಾಡಿದ್ದಾರೆ ಎನ್ನಲಾಗಿದೆ.

ಕಪ್ಪು ಹಣದ ವರದಿ ನೀಡಲು ನಿರಾಕರಣೆ

ನವದೆಹಲಿ, ಫೆ. 4: ಭಾರತೀಯರು ದೇಶ ಮತ್ತು ವಿದೇಶಗಳಲ್ಲಿ ಹೊಂದಿರುವ ಕಪ್ಪು ಹಣದ ಕುರಿತ ಮೂರು ವರದಿಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಸದ್ಯ ಸಂಸದೀಯ ಸಮಿತಿಯ ಪರಿಶೀಲನೆಯಲ್ಲಿದೆ. ಹೀಗಾಗಿ ವರದಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಹೇಳಿದೆ. ವಿವಿಧ ಸಂಸ್ಥೆಗಳು ನಾಲ್ವರು ವರ್ಷಗಳ ಹಿಂದೆಯೇ ಈ ಮೂರು ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿವೆ. ದೆಹಲಿ ಮೂಲದ ಎನ್‍ಐಪಿಎಫ್‍ಪಿ, ಫರಿದಾಬಾದ್‍ನ ಎನ್‍ಸಿಎಇಆರ್ ಹಾಗೂ ಎನ್‍ಐಎಫ್‍ಎಂ ದೇಶ ಮತ್ತು ವಿದೇಶಗಳಲ್ಲಿನ ಕಪ್ಪು ಹಣದ ಕುರಿತು ಅಧ್ಯಯನ ನಡೆಸಿ 2013-14ರಲ್ಲಿ ವರದಿ ನೀಡಿದ್ದವು. ಈ ಮೂರು ಸಂಸ್ಥೆಗಳು ನೀಡಿರುವ ವರದಿ ಬಗ್ಗೆ ಮಾಹಿತಿ ಕೋರಿ ಆರ್‍ಟಿಐ ಅರ್ಜಿ ಸಲ್ಲಿಸಲಾಗಿತ್ತು.