ಮಡಿಕೇರಿ, ಫೆ. 4: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೇಸಿಗೆ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವದು ಮಾಮೂಲಿಯಾಗಿದೆ. ಹೀಗಿರುವಾಗ ಮಂಗಳಾದೇವಿನಗರದಲ್ಲಿರುವ ರೋಷನಾರ ಕೆರೆ ಅದೆಷ್ಟೋ ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುವ ಜಲಮೂಲವಾಗಿದ್ದು, ಈ ಜಲಮೂಲ ಸದ್ಯದಲ್ಲೇ ಮಣ್ಣು ಪಾಲಾಗುವ ಸಾಧ್ಯತೆ ಹೆಚ್ಚಿದೆ. ಈ ಜಲಮೂಲದ ಬಳಿ ಮನೆಯೊಂದರ ತಡೆಗೋಡೆ ನಿರ್ಮಾಣಕ್ಕೆಂದು ಬರೆಯನ್ನು ಅಗೆಯಲಾಗಿದ್ದು, ಲೋಡುಗಟ್ಟಲೆ ಮಣ್ಣನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ. ಈ ಮಧ್ಯೆ ಅಗೆಯಲಾದ ಮಣ್ಣು ರೋಷನಾರ ಕೆರೆಯ ದಡದಲ್ಲೂ ಯಥೇಚ್ಛವಾಗಿ ಸಂಗ್ರಹಗೊಂಡಿದ್ದು, ಒಂದು ವೇಳೆ ಮಳೆ ಸುರಿಯಿತೆಂದರೆ ದಡದಲ್ಲಿರುವ ಮಣ್ಣು ಕೆರೆಯನ್ನು ಸೇರಿ ನೀರು ಸಂಪೂರ್ಣ ಕೊಳಕಾಗಲಿದೆ. ಮೊದಲೇ ರೋಷನಾರ ಕೆರೆಯ ನೀರು ಅಶುಚಿತ್ವದಿಂದ ಕೂಡಿದ್ದು, ಅದಕ್ಕೆ ಪುನಃ ಮಣ್ಣು ತುಂಬಿಕೊಂಡರೆ ಕುಡಿಯುವ ನೀರಿಗೆ ಸಂಚಕಾರ ಎದುರಾಗುವದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಈ ಬಗ್ಗೆ ನಗರಸಭೆ ಎಚ್ಚರ ವಹಿಸುವಂತೆ ಸ್ಥಳೀಯರು ‘ಶಕ್ತಿ’ ಮೂಲಕ ಒತ್ತಾಯಿಸಿದ್ದಾರೆ.