ಗೋಣಿಕೊಪ್ಪಲು, ಫೆ. 4: ಹೊಸೂರು, ಬೆಟ್ಟಗೇರಿ ಹಾಗೂ ಕಳತ್ಮಾಡುವಿನ ಗ್ರಾಮೀಣ ರಸ್ತೆ ಅಭಿವೃದ್ಧಿಯನ್ನು ಸುಮಾರು ರೂ. 1.40 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೊಸೂರುವಿನ ಜೇಡಿ ದೇವಸ್ಥಾನ ಸಮೀಪ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಹೊಸೂರು ಜೇಡಿ ದೇವಸ್ಥಾನ ಲಿಂಕ್ ರಸ್ತೆಯಲ್ಲಿ ಮಳೆಹಾನಿ ಪರಿಹಾರ ಮೊತ್ತದಲ್ಲಿ ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. 2018-19ನೇ ಸಾಲಿನ 3054 ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ, 3054 ನಿರ್ವಹಣೆ ಯೋಜನೇತರ ಅನುದಾನದ ಕಾಮಗಾರಿಗಗಳು, 2018-19ನೇ ಸಾಲಿನ ಜಿ.ಪಂ.ನ ಅಭಿವೃದ್ಧಿ ಅನುದಾನ ಕಾಮಗಾರಿಗಳು, 2018-19ನೇ ಸಾಲಿನ 2702 ಕೆರೆ ಕಾಮಗಾರಿಗಳು, ಶಾಸಕ ಬೋಪಯ್ಯ ಅವರ ವಿಧಾನಸಭಾ ಸದಸ್ಯರ ಅನುದಾನ ಕಾಮಗಾರಿಗಳು ಒಳಗೊಂಡಂತೆ ರೂ. 82 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ರಸ್ತೆ ಅಭಿವೃದ್ಧಿ, ಲಿಂಕ್ ರಸ್ತೆ ಅಭಿವೃದ್ಧಿ, ಕೆರೆ ಹೂಳೆತ್ತುವದು ಹಾಗೂ ತಡೆಗೋಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೊಸೂರು ಗ್ರಾ.ಪಂ. ಸದಸ್ಯ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರು ಮಾಹಿತಿ ನೀಡಿದರು.

ಇದಲ್ಲದೆ ಹೊಸೂರು-ಬೆಟ್ಟಗೇರಿ ಶಾಲೆಯ ಎರಡು ಕೊಠಡಿ ದುರಸ್ತಿ ರೂ. 1.50 ಲಕ್ಷ, ಕಳತ್ಮಾಡು ಎಸ್‍ಸಿ, ಎಸ್.ಟಿ.ಕಾಲೋನಿ ಬಾವಿ ಕುಸಿತ ತಡೆಗಟ್ಟಲು ರೂ. 80 ಸಾವಿರ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ಪಾಲಿಬೆಟ್ಟ-ದುಬಾರೆ ಕಾಲೋನಿ ಚರಂಡಿ ಮತ್ತು ಕಾಂಕ್ರಿಟ್ ಕಾಮಗಾರಿ, ಬೆಟ್ಟಗೇರಿ ಕಾಲೋನಿ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೇರಿ-ಹಂಚಿಕಾಡು ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು ರೂ. 40 ಲಕ್ಷದಲ್ಲಿ ಅಭಿವೃದ್ಧಿ, ಕಳತ್ಮಾಡು ಗಿರಿಜನ ಕಾಲೋನಿ ರಸ್ತೆಗೆ ರೂ. 10 ಲಕ್ಷ ಹಾಗೂ ಗೊಟ್ಟಡ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ ಬಿಡುಗಡೆಯಾಗಿದ್ದು ಒಟ್ಟಾರೆ ರೂ. 1.42 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಅರ್ಚಕ ವೆಂಕಟೇಶ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಭೂಮಿಲಿಪೂಜೆ ಸಂದರ್ಭ ಜಿ.ಪಂ. ಸದಸ್ಯ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಬೇರ ಗಣೇಶ, ಮಲ್ಲಂಡ ಮಧು ದೇವಯ್ಯ, ಗ್ರಾ.ಪಂ. ಸದಸ್ಯ ಕೊಲ್ಲೀರ ಧನು ಪೂಣಚ್ಚ, ಪಿಡಿಓ ಶ್ರೀನಿವಾಸ್, ಕಾಂತಿ ಸೋಮಯ್ಯ, ಬಿ.ಸಿ. ಕಾವೇರಮ್ಮ, ಗುತ್ತಿಗೆದಾರರಾದ ಸಿ.ಯು. ಸುಬ್ಬಯ್ಯ, ಅಭಿನ್ ಮಂದಣ್ಣ, ದಿನೇಶ್ ಮಾದಯ್ಯ, ಕೊರಗಪ್ಪ ಮುಂತಾದವರು ಉಪಸ್ಥಿತರಿದ್ದರು.