ಮಡಿಕೇರಿ, ಜ. 4: ಚೆಯ್ಯಂಡಾಣೆಯ 2773ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, ಸಂಘದ ನಾಲ್ವರು ಉದ್ಯೋಗಿಗಳು ಸೇರಿ ಒಟ್ಟು ರೂ. 1,26,38,435.60 ಮೊತ್ತದ ದುರುಪಯೋಗ ಎಸಗಿರುವದಾಗಿ; ಆಡಳಿತ ಮಂಡಳಿ ಅಧ್ಯಕ್ಷರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಇದೇ ಸಂಘದ ಇನ್ನಿಬ್ಬರು ಸಿಬ್ಬಂದಿಗಳು ಮೇಲಿನ ದುರುಪಯೋಗದೊಂದಿಗೆ ಮತ್ತೆ ರೂ. 5,02,294 ಮೊತ್ತ ಉಳಿತಾಯ ಖಾತೆ ಹಣವನ್ನು ಕೂಡ ದುರುಪಯೋಗ ಎಸಗಿದ್ದಾರೆ ಎಂದು ದೂರಿನಲ್ಲಿ ಬಹಿರಂಗಗೊಳಿಸಿದ್ದಾರೆ.ಈ ಸಂಬಂಧ ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಎಂ. ಸುಬ್ಬಯ್ಯ ಅವರು, ಜನವರಿ 21 ರಂದು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿರುವ ಮೇರೆಗೆ, ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 10/2019(111) ವಿಧಿ ಅನ್ವಯ ಐಪಿಸಿ 420,408,409ರ ಅಡಿಯಲ್ಲಿ ಪ್ರಕರಣ ದಾಖಲಾಗಿರುವದು ಬೆಳಕಿಗೆ ಬಂದಿದೆ.

ಅಲ್ಲದೆ ಚೆಯ್ಯಂಡಾಣೆ ವಿಎಸ್‍ಎಸ್‍ಎನ್‍ನಲ್ಲಿ ವಂಚನೆ ಎಸಗಿರುವ ಅಲ್ಲಿನ ಕಾರ್ಯನಿರ್ವಾಹಕ ಅಧಿಕಾರಿ ಮಹಿಳೆ ಸಿ.ಎಂ. ಗೋಪಿ, ಗುಮಾಸ್ತರುಗಳಾದ ಬಿ.ಎಸ್. ಅಯ್ಯಪ್ಪ, ಸಿ.ಕೆ. ಚಂಗಪ್ಪ ಹಾಗೂ ಲೆಕ್ಕಾಧಿಕಾರಿ ಉಮಾವತಿ ಈ ನಾಲ್ವರು ಸಂಘಕ್ಕೆ ವಂಚನೆಯೊಂದಿಗೆ ಕಾಣೆಯಾಗಿದ್ದಾರೆ ಎಂದು ಅಧ್ಯಕ್ಷರು ಪೊಲೀಸ್ ಪುಕಾರಿನಲ್ಲಿ ಆರೋಪಿಸಿದ್ದಾರೆ.

ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಾರ್ಷಿಕ ಲೆಕ್ಕ ತಪಾಸಣೆಯ ವೇಳೆ, ಈ ಭಾರೀ ಹಣ ದುರುಪಯೋಗ ಬೆಳಕಿಗೆ ಬಂದಿರುವ ಮೇರೆಗೆ, ಆರೋಪಿಗಳಾದ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಸಲ್ಲಿಸಿರುವದಾಗಿ ಆಡಳಿತ ಮಂಡಳಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ದೂರಿನ ಸಾರಾಂಶ: ಚೆಯ್ಯಂಡಾಣೆ ನಂ. 2773ನೇ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಸಿಬ್ಬಂದಿಗಳಾದ ಸಿ.ಎಂ. ಗೋಪಿ, ಬಿ.ಎಸ್. ಅಯ್ಯಪ್ಪ, ಸಿ.ಕೆ. ಚಂಗಪ್ಪ ಇವರುಗಳು 2016-17ನೇ ಸಾಲಿನಲ್ಲಿ ಸಂಘಕ್ಕೆ ರೂ.10,94,135 ಮೊತ್ತದ ವಂಚನೆ ಎಸಗಿರುವದಾಗಿದೆ; 2017-18ನೇ ಸಾಲಿನಲ್ಲಿ ಮತ್ತೆ ರೂ. 1,15,44,300.60 ಮೊತ್ತ ಸಹಿತ ಒಟ್ಟು ರೂ.1,26,38,435.60 ಗಳಷ್ಟು ಸಂಘದ ಹಣವನ್ನು ದುರುಪಯೋಗ ಎಸಗಿರುವದು ಲೆಕ್ಕ ತಪಾಸಣೆ ವರದಿಯಿಂದ ಬಹಿರಂಗವಾಗಿದೆ.

ಅಲ್ಲದೆ ಸಿ.ಎಂ. ಗೋಪಿ ಹಾಗೂ ಪಿ.ಕೆ. ಉಮಾವತಿ ಇವರುಗಳು ಸಂಘದ ಉಳಿತಾಯ ಖಾತೆ ಹಣ ರೂ. 5,02,294.00 ಮೊತ್ತವನ್ನು ಕೂಡ ದುರುಪಯೋಗ ಎಸಗಿರುವದು ಲೆಕ್ಕ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಮೇಲಿನ ದುರುಪಯೋಗ ಹಗರಣದಲ್ಲಿ ಚೆಯ್ಯಂಡಾಣೆ ಕೃಷಿ ಪತ್ತಿನ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಳೆದ ಜುಲೈ 31 ರಂದು ನಿವೃತ್ತಿ ಹೊಂದಿರುವ ಸಿ.ಎಂ. ಗೋಪಿ, ಕರ್ತವ್ಯದಿಂದ ವಜಾಗೊಂಡಿರುವ ಮಾರಾಟ ಗುಮಾಸ್ತ ಬಿ.ಎಸ್. ಅಯ್ಯಪ್ಪ, ಅಮಾನತುಗೊಂಡಿರುವ ಸಿ.ಕೆ. ಚಂಗಪ್ಪ ಹಾಗೂ ಸಂಘದ ಲೆಕ್ಕಿಗರಾಗಿರುವ ಪಿ.ಕೆ. ಉಮಾವತಿ ವಿರುದ್ಧ ಮಹಾಸಭೆಯಲ್ಲಿ ಕಾನೂನು ಕ್ರಮಕ್ಕೆ ಮಹಾಸಭೆ ಶಿಫಾರಸ್ಸು ಮಾಡಿದೆ.